ಅಭಿವೃದ್ಧಿ ಕಾರ್ಯ ಸಂಪೂರ್ಣ ನಿಂತು ಹೋಗಿದೆ
ಬೆಂಗಳೂರು: ಕಾಂಗ್ರೆಸ್ ನಾಯಕತ್ವದ ವಿರುದ್ಧ ಶಾಸಕರೇ ತಿರುಗಿ ಬಿದ್ದಿದ್ದಾರೆ. ದಿನ ಬೆಳಗಾದರೆ ಮುಖ್ಯಮಂತ್ರಿ ಕುರ್ಚಿಯ ಚರ್ಚೆಯೇ ನಡೆಯುತ್ತಿದೆ. ಮುಂದೆ ಯಾರು ಮುಖ್ಯಮಂತ್ರಿ ಆಗಬೇಕು ಅನ್ನೋದರ ಕಡೆಯೇ ಕಾಂಗ್ರೆಸ್ ನಾಯಕರೆಲ್ಲರ ಗಮನ ಇದೆ. ಇದರ ದುಷ್ಪರಿಣಾಮದಿಂದಾಗಿ ರಾಜ್ಯದ ಆಡಳಿತ ಅಯೋಮಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ಇದರ ಪರಿಣಾಮ ಎಂಬಂತೆ ಅಭಿವೃದ್ಧಿ ಕಾರ್ಯ ಸಂಪೂರ್ಣ ನಿಂತು ಹೋಗಿದೆ.
ರಸ್ತೆಗಳ ಕೆಲಸ ಆಗುತ್ತಿಲ್ಲ, ಕೆಲಸ ಮಾಡಿದವರಿಗೆ ಬಿಲ್ ಕೊಡುತ್ತಿಲ್ಲ
ರಸ್ತೆಗಳ ಕೆಲಸ ಆಗುತ್ತಿಲ್ಲ, ಕೆಲಸ ಮಾಡಿದವರಿಗೆ ಬಿಲ್ ಕೊಡುತ್ತಿಲ್ಲ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರ ಆ ಹಣವನ್ನೂ ಕೊಡುತ್ತಿಲ್ಲ ಎಂಬ ದೂರು ಬಂದಿದೆ ಎಂದರು.
ಕೆಲಸ ಮಾಡಿದವರು ಅಧಿಕಾರಿಗಳ ಬಳಿ ಹೋಗಿ ಹಣ ಕೇಳಿದರೆ ಈಗ ಹಣ ಕೊಡಬೇಡಿ ಅಂತ ಮೇಲಿನಿಂದ ಸೂಚನೆ ಬಂದಿದೆ ಅಂತ ಹೇಳುತ್ತಾರಂತೆ. ಈ ಮೇಲಿನವರು ಅಂದರೆ ಯಾರು, ಅವರು ಏಕೆ ಬಿಲ್ ಪೆಂಡಿಂಗ್ ಇಡಿ ಅಂತ ಹೇಳ್ತಾರೆ, ಕೆಲಸ ಸರಿ ಮಾಡಿಲ್ಲ ಅಂದ್ರೆ ಕ್ರಮ ಕೈಗೊಳ್ಳಿ, ಕೆಲಸ ಸರಿಯಾಗಿ ಮಾಡಿದ್ರೆ ಹಣ ಬಿಡುಗಡೆ ಮಾಡಿ, ಎರಡೂ ಮಾಡದೇ ಬಿಲ್ ಪೆಂಡಿಂಗ್ ಇಡಿ ಅಂತ ಮೇಲಿನಿಂದ ತಿಳಿಸಿದ್ದಾರೆ ಅಂದರೆ ಏನರ್ಥ.
ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರ ಪರಿಣಾಮವಾಗಿ ಆಡಳಿತ ನೆಲಕಚ್ಚಿದೆ ಅಂತ ಟೀಕಿಸಿದರು.
ಸಿಬಿಐ ತನಿಖೆ ಮುಂದುವರಿಯಲಿದೆ
ಇನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಲ್ಹಾದ ಜೋಶಿ, ಈ ತೀರ್ಪನ್ನ ಮುನ್ನಡೆ ಅನ್ನುತ್ತೀರೋ, ಹಿನ್ನಡೆ ಅನ್ನುತ್ತೀರೋ ಅದು ನಿಮಗೆ ಬಿಟ್ಟಿದ್ದು, ಆದರೆ ಸಿಬಿಐ ತನಿಖೆ ಮುಂದುವರಿಯಲಿದೆ ಅನ್ನೋದು ಪ್ರಾಥಮಿಕ ಮಾಹಿತಿಗಳಿಂದ ತಿಳಿದಿದೆ.
ಒಂದು ವೇಳೆ ಶಿವಕುಮಾರ್ ಸಿಬಿಐ ತನಿಖೆಗೆ ಸಹಕರಿಸದಿದ್ದರೆ ಆಗ ಸಿಬಿಐ ಅಧಿಕಾರಿಗಳು ಕೋರ್ಟ್ಗೆ ಹೋಗಬಹುದು ಎಂದು ಪ್ರತಿಕ್ರಿಯೆ ನೀಡಿದರು.