ಇಪ್ಪತ್ತು ನಿಗಮಗಳ ಅಧ್ಯಕ್ಷರ ನೇಮಕಾತಿ ಪಟ್ಟಿ ಅಂತಿಮ
ಬೆಂಗಳೂರು: ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇನ್ನೂ ಮೀನಾ-ಮೇಷ ಎಣಿಸುತ್ತಿದೆ.
ಇಪ್ಪತ್ತು ನಿಗಮಗಳಿಗೆ ಅಧ್ಯಕ್ಷರ ನೇಮಕಾತಿಗೆ ಪಟ್ಟಿ ಅಂತಿಮಗೊಂಡಿದ್ದರೂ ವರಿಷ್ಠರ ಅನುಮತಿಗೆ ಪ್ರದೇಶ ಕಾಂಗ್ರೆಸ್ ಪಟ್ಟಿಯನ್ನೇ ರವಾನೆ ಮಾಡಿಲ್ಲ.
ಕಾರ್ಯಕರ್ತರನ್ನು ಕಡೆಗಣಿಸಿ ಪಕ್ಷದ ಹಿರಿಯ ಶಾಸಕರಿಗೆ ಮೊದಲ ಪಟ್ಟಿಯಲ್ಲಿ ಆದ್ಯತೆ ಕಲ್ಪಿಸಿದ್ದು ಇದು ಅಸಮಾಧಾನಕ್ಕೆ ಕಾರಣವಾಗಿದೆ.
ಮೊದಲ ಪಟ್ಟಿ ಅಂತಿಮ; ಕಿರಿಯರು,ಕಾರ್ಯಕರ್ತರ ಕಡೆಗಣನೆ
ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಳಿತು ಚರ್ಚೆ ನಡೆಸಿ ಮೊದಲ ಪಟ್ಟಿ ಅಂತಿಮಗೊಳಿಸಿದ್ದರು.
ಸಚಿವ ಆಕಾಂಕ್ಷಿಗಳಾಗಿ ಮಂತ್ರಿಮಂಡಲದಲ್ಲಿ ಅವಕಾಶ ದೊರೆಯದ ಪಕ್ಷದ ಅತ್ಯಂತ ಹಿರಿಯ ಶಾಸಕರಿಗೆ ಅನುವು ಮಾಡಿಕೊಡಲಾಗಿದೆ.
ಹಿರಿಯರಿಗೆ ಮಾತ್ರ ಮಣೆ ಹಾಕಿ, ಕಿರಿಯರು ಮತ್ತು ಕಾರ್ಯಕರ್ತರನ್ನು ಕಡೆಗಾಣಿಸಲಾಗಿದೆ ಎಂಬ ಅಪಸ್ವರ ಕೇಳಿಬಂದಿದೆ.
ಈ ಅಪಸ್ವರದ ನಡುವೆಯೇ ಪಟ್ಟಿ ಬಿಡುಗಡೆ ಮಾಡಲು ಕೆಪಿಸಿಸಿ ಅಧ್ಯಕ್ಷರು ಆಸಕ್ತಿ ತೋರಿಸಿದ್ದಲ್ಲದೆ ವಷ್ಠರಿಗೆ ಪಟ್ಟಿ ರವಾನೆಯಾಗಿದೆ. ಅಲ್ಲಿಂದ ಅನುಮತಿ ದೊರೆತ ನಂತರ ಪ್ರಕಟಿಸಲಿದ್ದೇವೆ ಎಂದಿದ್ದರು.
ಅಧಿವೇಶನದ ನಂತರ ಪಟ್ಟಿ ಬಿಡುಗಡೆ
ಶಿವಕುಮಾರ್ ಹೇಳಿಕೆ ನಂತರ ಪಕ್ಷದ ಕೆಲವು ಮುಖಂಡರು, ಕಾರ್ಯಕರ್ತರಿಗೂ ಅವಕಾಶ ಮಾಡಿಕೊಡಿ ಎಂದಿದ್ದಲ್ಲದೆ, ಬೆಳಗಾವಿಯಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನದ ನಂತರ ಪಟ್ಟಿ ಬಿಡುಗಡೆ ಮಾಡಿ ಎಂದು ಸಲಹೆ ಮಾಡಿದ್ದರು.
ನಿಮಗಳಿಗೆ ಅವಕಾಶ ದೊರೆಯದ ಶಾಸಕರು ಸಮಾವೇಶದ ವೇಳೆ ಅಪಸ್ವರ ಎತ್ತಬಹುದು, ಇಲ್ಲವೇ ಗುಂಪು ಸಭೆಗಳನ್ನು ನಡೆಸಬಹುದು ಈ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳಿ ಎಂದಿದ್ದರು.
ಮುಖಂಡರ ಸಲಹೆ ಹಿನ್ನೆಲೆಯಲ್ಲಿ ನಿನ್ನೆ ಪ್ರಕಟಗೊಳ್ಳಬೇಕಿದ್ದ ಪಟ್ಟಿ ಇದುವರೆಗೂ ಬಿಡುಗಡೆ ಆಗಿಲ್ಲ, ಉನ್ನತ ಮೂಲಗಳ ಪ್ರಕಾರ ಪಟ್ಟಿ ವರಿಷ್ಠರಿಗೇ ತಲುಪಿಲ್ಲವಂತೆ.
ಸಚಿವ ಸ್ಥಾನ ಪ್ರಾತಿನಿಧ್ಯ ದೊರೆಯದ ಜಿಲ್ಲೆಗಳಲ್ಲಿನ ಹಿರಿಯ ಸದಸ್ಯರಿಗೆ ಪಟ್ಟಿಯಲ್ಲಿ ಮೊದಲ ಆದ್ಯತೆ ನೀಡಲಾಗಿದೆ.
ಜೊತೆಗೆ ಮೂರರಿಂದ ನಾಲ್ಕು ಬಾರಿ ವಿಧಾನಸಭೆ ಪ್ರವೇಶಿಸಿರುವ ಶಾಸಕರಿಗೂ ಅವಕಾಶ ನೀಡಲಾಗಿದೆ.
ಅದರಲ್ಲಿ ಕೆಲವು ಹಿರಿಯರು ನಿಗಮ ಸ್ಥಾನಗಳನ್ನು ವಹಿಸಿಕೊಳ್ಳಲು ನಿರಾಕರಿಸಿದ್ದಾರೆ. ಖುದ್ದಾಗಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿಗಳೇ ಇಂತಹವರನ್ನು ಸಂಪರ್ಕಿಸಿ ಅಧಿಕಾರ ವಹಿಸಿಕೊಳ್ಳುವಂತೆ ನೀಡಿದ ಸಲಹೆಯನ್ನೂ ನಯವಾಗಿ ತಳ್ಳಿಹಾಕಿದ್ದಾರೆ.
ಮಂತ್ರಿ ಸ್ಥಾನವೇ ಬೇಕಂತೆ
ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ನಿರಾಕರಿಸಿರುವವರಿಗೆ ಮಂತ್ರಿ ಸ್ಥಾನವೇ ಬೇಕಂತೆ. ಈಗ ಸಾಧ್ಯವಾಗದಿದ್ದರೆ, ಮುಂದಿನ ದಿನಗಳಲ್ಲಿ ನಮಗೆ ಅವಕಾಶ ಮಾಡಿಕೊಡಿ ಅಲ್ಲಿಯವರೆಗೂ ನಮಗೆ ಬೇರೆ ಅಧಿಕಾರ ಬೇಡ ಎಂದು ಸ್ಪಷ್ಟ ಪಡಿಸಿದ್ದಾರೆ.
ಈ ಮಧ್ಯೆ, ಲೋಕಸಭಾ ಚುನಾವಣೆ ನಂತರ ಕಾರ್ಯಕರ್ತರು ಮತ್ತು ಶಾಸಕರಿಗೆ ಉಳಿದ ನಿಗಮ-ಮಂಡಳಿಗಳನ್ನು ಸಮನಾಗಿ ಹಂಚಿಕೆ ಮಾಡಲು ಪಕ್ಷ ನಿರ್ಧರಿಸದೆ.