ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ
ಬೆಂಗಳೂರು: ಕರ್ನಾಟಕ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ಅಧಿಕಾರ ಸ್ವೀಕರಿಸಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿದ್ದ ವಂದಿತಾ ಶರ್ಮಾ ಅವರು ನವೆಂಬರ್ 30ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.
ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ರಾಜ್ಯ ಸರ್ಕಾರದ ಹೊಸ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ಅವರನ್ನು ಸರ್ಕಾರ ಈಗಾಗಲೇ ನೇಮಕ ಮಾಡಿತ್ತು.
ವಂದಿತಾ ಶರ್ಮಾ ಅವರ ನಿವೃತ್ತಿಯಿಂದ ತೆರವಾದ ಮುಖ್ಯಕಾರ್ಯದರ್ಶಿ ಹುದ್ದೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಸೇವಾ ಹಿರಿತನವನ್ನು ಪರಿಗಣಿಸಿ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನೇಮಕ ಮಾಡಿ ಆದೇಶಿಸಿತ್ತು.
ಡಿಸೆಂಬರ್ ಒಂದರಿಂದ ರಾಜ್ಯ ಸರ್ಕಾರದ ನೂತನ ಮುಖ್ಯಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ಕಾರ್ಯನಿರ್ವಹಿಸಲಿದ್ದಾರೆ.
ಹೀಗಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆಗೆ ರಾಜ್ಯದ ಹೊಸ ಮುಖ್ಯಕಾರ್ಯದರ್ಶಿಯಾಗಿ ಅವರು ಸೇವೆ ಸಲ್ಲಿಸಲಿದ್ದಾರೆ.