ಹೆಚ್‌ಐವಿ ಮುಕ್ತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿ
ಬೆಂಗಳೂರು:ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಭಾರತವನ್ನು ಏಡ್ಸ್ ಮುಕ್ತ ದೇಶವನ್ನಾಗಿ ಮಾಡುವಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದರು.
ವಿಶ್ವ ಏಡ್ಸ್ ದಿನ ಮತ್ತು 25ನೇ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್‌ಐವಿ ಮುಕ್ತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿಯಾಗಿದೆ, ಇಂದು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ, ಈ ಸಾಂಕ್ರಾಮಿಕ ರೋಗವನ್ನು ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
1986 ರಲ್ಲಿ ಈ ರೋಗ ಭಾರತದಲ್ಲಿ ಹಾಗೂ 1987ರಲ್ಲಿ ಕರ್ನಾಟಕದಲ್ಲಿ ಪತ್ತೆಯಾಯಿತು, ಇತ್ತೀಚಿನ ದಿನಗಳಲ್ಲಿ ಹೆಚ್‌ಐವಿ ಪೀಡಿತರ ಹಾಗೂ ಏಡ್ಸ್ ಹರಡುವಿಕೆ ಕಡಿಮೆಯಾಗುತ್ತಿದೆ, ಇದು ಒಳ್ಳೆಯ ಬೆಳವಣಿಗೆ.
ಮುಂದಿನ ಐದಾರು ವರ್ಷಗಳಲ್ಲಿ ದೇಶದಲ್ಲಿ ಏಡ್ಸ್ ಸೋಂಕು ಶೂನ್ಯಕ್ಕೆ ಇಳಿಯಬೇಕು
ಸಮಾಜವನ್ನು ಹೆಚ್‌ಐವಿ ಮುಕ್ತವನ್ನಾಗಿ ಮಾಡಬೇಕು, ಈ ಕುರಿತು ಜನರು ಮತ್ತು ಯುವಜನರಲ್ಲಿ ಜಾಗೃತಿ ಮೂಡಬೇಕು. ಮುಂದಿನ ಐದಾರು ವರ್ಷಗಳಲ್ಲಿ ದೇಶದಲ್ಲಿ ಏಡ್ಸ್ ಸೋಂಕು ಶೂನ್ಯಕ್ಕೆ ಇಳಿಯಬೇಕು, ಭಾರತ ಏಡ್ಸ್ ಪ್ರಕರಣಗಳಲ್ಲಿ ವಿಶ್ವದಲ್ಲಿಯೇ 3ನೇ ಸ್ಥಾನದಲ್ಲಿದೆ.
ಸಾಮೂಹಿಕವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು, ಏಡ್ಸ್ ರೋಗ ಬಂದರೆ ತಕ್ಷಣ ಪ್ರಾಣಾಪಾಯ ಇಲ್ಲ, ಆದರೆ ಇದು ವಾಸಿಯಾಗದ ರೋಗ, ವಿಜ್ಞಾನ ಬೆಳವಣಿಗೆಯಾದರೂ ಏಡ್ಸ್ ರೋಗಕ್ಕೆ ಇನ್ನೂ ಔಷಧಿ ಕಂಡುಹಿಡಿಯಲಾಗಿಲ್ಲ, ಆರೋಗ್ಯ ಇಲಾಖೆ ಈ ಬಗ್ಗೆ ಸಂಶೋಧನೆಗಳನ್ನು ಹೆಚ್ಚು-ಹೆಚ್ಚು ನಡೆಸಬೇಬೇಕು ಎಂದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಏಡ್ಸ್ ಪೀಡಿತ ವ್ಯಕ್ತಿಯೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿ, ಕಾಯಿಲೆ ಬಂದ ನಂತರವೂ 26 ವರ್ಷಗಳ ಕಾಲ ಬದುಕಿ, ಧೈರ್ಯವಾಗಿದ್ದಾರೆ ಎಂದು ಸಭೆಗೆ ತಿಳಿಸಿದರು.