ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಪರಿಸ್ಥಿತಿ ನಿಭಾಯಿಸಲು ಜಲ ವಿದ್ಯುತ್ ಉತ್ಪಾದನಾ ಅಣೆಕಟ್ಟೆ
ಹಾಗೂ ಇಂಧನ ಇಲಾಖೆಯ ಪ್ರಮುಖ ಕಟ್ಟಡಗಳನ್ನು ಸರ್ಕಾರ ಅಡಮಾನ ಇಟ್ಟಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕದ ಇತಿಹಾಸದಲ್ಲೇ ವಿದ್ಯುತ್ ಬಳಕೆ ಪ್ರಮಾಣ ದ್ವಿಗುಣಗೊಂಡಿದೆ,
ಇದೇ ಸಂದರ್ಭದಲ್ಲಿ ಉತ್ಪಾದನೆ ಸಹ ಕುಂಠಿತಗೊಂಡಿದೆ. ವಿದ್ಯುತ್ ಪ್ರಸರಣ ನಿಗಮಗಳು ಮತ್ತು ಸರ್ಕಾರ ದಿಂದ ಕೆಪಿಸಿಎಲ್‌ಗೆ ಹಣ ಪಾವತಿಸದೆ ಇರುವುದರಿಂದ ಅಣೆಕಟ್ಟೆ ಹಾಗೂ ವಿದ್ಯುತ್ ಉತ್ಪಾದಿಸುವ ಯಂತ್ರಗಳನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಅಡವಿಟ್ಟು ಸಾಲ ಪಡೆದಿದೆ.
ರಾಜ್ಯ ಸರ್ಕಾರವು ಕರ್ನಾಟಕ ಪವರ್ ಕಾರ್ಪೊರೇಷನ್‌ಗೆ 21,000 ಕೋಟಿ ರೂ. ಬಾಕಿ ಪಾವತಿಸಬೇಕು, ಆದರೆ, ಬಾಕಿ ಕೊಡುವುದಿರಲಿ, ಪ್ರತಿ ತಿಂಗಳು ಒಂದು ಸಾವಿರದಿಂದ 1,200 ಕೋಟಿ ರೂ. ನೀಡಬೇಕಾದ ಹಣವನ್ನೂ ಪಾವತಿಸಿಲ್ಲ.
ಗೃಹಜ್ಯೋತಿ ಯೋಜನೆ ಜಾರಿ ನಂತರ ಪ್ರಸರಣ ನಿಗಮಗಳು ಕೆಪಿಟಿಸಿಎಲ್‌ಗೆ ನೀಡಬೇಕಾದ ಹಣದಲ್ಲೂ ಕಡಿತವಾಗುತ್ತಿದೆ. ಸರ್ಕಾರದ ಗ್ಯಾರೆಂಟಿ ಯೋಜನೆ ಅನುಷ್ಟಾನ ಒಂದೆಡೆಯಾದರೆ, ಮತ್ತೊಂದೆಡೆ ರಾಜ್ಯದ ಬಹುಭಾಗ ಬರಕ್ಕೆ ಸಿಲುಕಿರುವುದರಿಂದ ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಬೇಡಿಕೆ ಒಂದೆಡೆ ಹೆಚ್ಚಳವಾಗುತ್ತಿದ್ದರೆ, ಮತ್ತೊಂದೆಡೆ ಉತ್ಪಾದನೆ ಕುಂಠಿತವಾಗುತ್ತಿದೆ. ಗಾಹಕರ ಬೇಡಿಕೆ ಈಡೇರಿಸಲು ಕೆಪಿಟಿಸಿಎಲ್ ಅನ್ಯ ರಾಜ್ಯಗಳು ಮತ್ತು ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿ ಮಾಡುವುದು ಅನಿವಾರ್ಯ. ಆದರೆ ಖರೀದಿ ಮಾಡಲು ತಮ್ಮ ಬಳಿಯೂ ಹಣವಿಲ್ಲ. ಸರ್ಕಾರವೂ ನೀಡುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಗ್ರಾಹಕರ ವಿದ್ಯುತ್ ಬೇಡಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಬೇಕಿದೆ.
ಈ ಕಾರಣಕ್ಕಾಗಿ ತನ್ನ ಜಲಾಶಯಗಳನ್ನೇ ಅಡವಿಟ್ಟು ಸಾಲ ಪಡೆದಿದೆ, ಇದರೊಟ್ಟಿಗೆ ಪ್ರಮುಖ ಕಟ್ಟಡಗಳೂ ಅಡಮಾನದಲ್ಲಿವೆ. ವಿವಿಧ ಇಲಾಖೆಗಳು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಾಲ ಪಡೆಯಲು ಸರ್ಕಾರ ಗ್ಯಾರೆಂಟಿ ಕೊಡುತ್ತದೆ. ಇದೇ ರೀತಿ ಕೆಪಿಟಿಸಿಎಲ್‌ಗೂ ಗ್ಯಾರೆಂಟಿ ಇದ್ದರೂ ಅದೂ ಸಾಲದೆ, ಅಡಮಾನ ಇಡುವಂತಾಗಿದೆ.
ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ವೇತನ ನೀಡಲು ಕೊಲ್ಕತಾ ಮೂಲದ ಖಾಸಗಿ ವಿಮಾ ಸಂಸ್ಥೆಯಿಂದ 300 ಕೋಟಿ ರೂ. ಸಾಲ ಪಡೆದಿದ್ದರು. ಅಂದು ಇದು ಭಾರೀ ವಿವಾದಕ್ಕೆ ಎಡೆ ಮಾಡಿತ್ತು. ನಂತರದ ದಿನಗಳಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಐದು ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲ ಮಾಡಿವೆ.