ಸೆಮಿ ಫೈನಲ್ ಬಿಜೆಪಿ ಪರ: ವಿಜಯೇಂದ್ರ
ಬೆಂಗಳೂರು: ಇಡೀ ದೇಶದಲ್ಲಿ ವಾತಾವರಣ ಬಿಜೆಪಿ ಪರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ವಿಶ್ಲೇಷಿಸಿದರು.
ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಜೀ ಅವರು ಪ್ರಧಾನಮಂತ್ರಿ ಆಗಬೇಕೆಂಬ ಆಸೆ ಜನತೆಯಲ್ಲಿ ಇದೆ ಎಂಬುದು ನಾಲ್ಕು ರಾಜ್ಯ ಚುನಾವಣಾ ಫಲಿತಾಂಶದಿಂದ ಗೊತ್ತಾಗಿದೆ ಎಂದು ತಿಳಿಸಿದರು.
ಪಂಚರಾಜ್ಯ ಚುನಾವಣೆ ಒಂದು ರೀತಿಯ ಸೆಮಿ ಫೈನಲ್ ಎಂದು ವಿಶ್ಲೇಷಿಸಲಾಗುತ್ತಿತ್ತು. ಸುನಾಮಿ ರೀತಿಯಲ್ಲಿ ಬಿಜೆಪಿ ಅಲೆ ಎದ್ದಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.
ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ
4 ರಾಜ್ಯಗಳ ವಿಜಯ, ವಿಜಯ ಯಾತ್ರೆ ಇಲ್ಲಿಗೇ ನಿಲ್ಲುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಜೀ ಅವರು ಪ್ರಧಾನಿ ಆಗುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ ಎಂದು ತಿಳಿಸಿದರು.
ಜನರು ದೇಶರ ಕ್ಷಣೆಯ ಗ್ಯಾರಂಟಿ ಬಯಸುತ್ತಿದ್ದಾರೆಯೇ ಹೊರತು, ಅಧಿಕಾರ ಕಬಳಿಸುವ ಆಮಿಷದ ಗ್ಯಾರಂಟಿಗಳನ್ನಲ್ಲ ಎಂಬುದು ಸ್ಪಷ್ಟವಾಗಿ ಈ ಫಲಿತಾಂಶದ ಮೂಲಕ ಗೊತ್ತಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೂ ಕೂಡ ಗೊತ್ತಾಗಿದೆ ಎಂದು ವಿವರಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಗ್ಯಾರೆಂಟಿಗಳೆಂಬ ಆಮಿಷದ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಈಗಾಗಲೇ ರಾಜ್ಯದ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ.
6 ತಿಂಗಳುಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಅಭಿವೃದ್ಧಿ ಕೆಲಸಗಳು ಯಾವ ರೀತಿ ಕುಂಠಿತವಾಗಿವೆ, ರೈತರು ಯಾವ ರೀತಿಯಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದನ್ನು ಗಮನಿಸಿರುವ ರಾಜ್ಯದ ಜನತೆ ಬೇಸತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ- ಎನ್‍ಡಿಎ ಭಾಗೀದಾರ ಪಕ್ಷ ಜೆಡಿಎಸ್‍ಗಳು ಒಟ್ಟಾಗಿ ಚುನಾವಣೆ ಎದುರಿಸಲಿವೆ. 28ಕ್ಕೆ 28 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ನಾಯಕತ್ವ ದೇಶಕ್ಕೆ ಅಗತ್ಯ
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ ರಾಜ್ಯಗಳ ಫಲಿತಾಂಶ ಬಿಜೆಪಿ ಪರವಾಗಿ ಬಂದಿದೆ. ನರೇಂದ್ರ ಮೋದಿಜೀ ಅವರ ನಾಯಕತ್ವ ಈ ದೇಶಕ್ಕೆ ಅಗತ್ಯ ಇದೆ. 3ನೇ ಬಾರಿಗೆ ಪ್ರಧಾನಮಂತ್ರಿ ಆಗುವುದರ ಮೂಲಕ ಅಭಿವೃದ್ಧಿ ಪಥದಲ್ಲಿ ಈ ದೇಶ ಸಾಗಬೇಕೆಂಬ ಸಂದೇಶವನ್ನು ಈ ರಾಜ್ಯಗಳ ಚುನಾವಣೆಯಲ್ಲಿ ಮತದಾರರು ನೀಡಿದ್ದಾರೆ ಎಂದು ತಿಳಿಸಿದರು.
ತೆಲಂಗಾಣ ವಿಧಾನಸಭೆ ಚುನಾವಣೆ ವಿಚಾರದಲ್ಲಿ ಬಿಜೆಪಿಗೆ ಬಹಳ ನಿರೀಕ್ಷೆ ಇರಲಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣ ರಾಜ್ಯದ ಮತದಾರರು ಕೂಡ ಬಿಜೆಪಿ ಕೈಹಿಡಿಯಲಿದ್ದಾರೆ. ನರೇಂದ್ರ ಮೋದಿಜೀ ಅವರಿಗೆ ಶಕ್ತಿ ಕೊಡುತ್ತಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಗ್ಯಾರಂಟಿ ಪರಿಣಾಮ ಬೀರಿದ್ದರೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡದಲ್ಲೂ ಕಾಂಗ್ರೆಸ್ ಗೆಲ್ಲಬೇಕಿತ್ತು. ಕರ್ನಾಟಕದಲ್ಲಿ ಯಾವ ರೀತಿ ಮತದಾರರ ಕಣ್ಣಿಗೆ ಬೂದಿ ಎರಚಿ ಯಶಸ್ವಿ ಆದರೋ, ತೆಲಂಗಾಣದಲ್ಲೂ ಕೂಡ ಮೇಲ್ನೋಟಕ್ಕೆ ಹಾಗೇ ಮಾಡಿದ್ದು ಗೊತ್ತಾಗುತ್ತದೆ. ತೆಲಂಗಾಣದಲ್ಲಿದ್ದ ಆಡಳಿತ ವಿರೋಧಿ ಅಲೆಯ ಪ್ರಯೋಜನ ಪಡೆಯಲು ಕಾರಣಾಂತರಗಳಿಂದ ಬಿಜೆಪಿಗೆ ಆಗಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಕರ್ನಾಟಕದಲ್ಲಿ ಆದ ಆದಾಯ ತೆರಿಗೆ ದಾಳಿ, ನೂರಾರು ಕೋಟಿ ಹಣ ಲಭಿಸಿದ್ದು ಇದಕ್ಕೆ ಸಾಕ್ಷಿ. ಎಷ್ಟು ಹಣ ತೆಲಂಗಾಣಕ್ಕೆ ವರ್ಗಾವಣೆ ಆಗಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡರೇ ಹೇಳಬೇಕಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟವಾಗಿ ಮೇಲುಗೈ ಆಗಲಿದೆ ಎಂದು ತಿಳಿಸಿದರು.