ಹಣ ಬಿಡುಗಡೆಗೆ ಸಿಎಂಗೆ ಸಚಿವ ಚಲುವರಾಯ ಸ್ವಾಮಿ ಪತ್ರ
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಆರು ತಿಂಗಳಲ್ಲಿ ಮಾಧ್ಯಮಗಳಿಗೆ ಜಾಹೀರಾತು ನೀಡಲು 140 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದಾರೆ.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪ್ರಕಟಿಸಿದ್ದ ಐದು ಗ್ಯಾರೆಂಟಿಗಳ ಅನುಷ್ಟಾನದ ಪ್ರಚಾರಕ್ಕಾಗಿ ಇದರಲ್ಲಿ ಹೆಚ್ಚಿನ ಹಣವನ್ನು ಜಾಹಿರಾತಿಗೆ ಬಳಕೆ ಮಾಡಲಾಗಿದೆ.
ಕೋಟಿ-ಕೋಟಿ ಮೌಲ್ಯದ ಕಾರುಗಳ ಖರೀದಿ
ಈ ಸಂಬಂಧ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರ ಭಾರೀ ವಿವಾದಕ್ಕೆ ಎಡೆ ಮಾಡಿದರೆ, ಮತ್ತೊಂದೆಡೆ ಬಿಜೆಪಿ, ಕೋಟಿ-ಕೋಟಿ ಮೌಲ್ಯದ ಕಾರುಗಳ ಖರೀದಿ, ಕಚೇರಿ, ಮನೆಗಳ ನವೀಕರಣಕ್ಕೆ ನೂರಾರು ಕೋಟಿ ರೂ. ದುಂದು ವೆಚ್ಚ ಮಾಡಿದ ನಂತರ ಈಗ ಮಾಧ್ಯಮ ಜಾಹೀರಾತುಗಳಿಗೆ 140 ಕೋಟಿ ರೂ. ವ್ಯಯಿಸಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಸರಣಿ ಟ್ವೀಟ್
ಚಲುವರಾಯ ಸ್ವಾಮಿ ಪತ್ರ ಬಹಿರಂಗಗೊಳ್ಳುತ್ತಿದ್ದಂತೆ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರಣಿ ಟ್ವೀಟ್ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆರ್ಥಿಕ ಸುಧಾರಣೆಗಳ ಹರಿಕಾರ, ಅತಿ ಹೆಚ್ಚು ಬಜೆಟ್‌ಗಳನ್ನು ಮಂಡಿಸಿದ ಮುಖ್ಯಮಂತ್ರಿಗಳು ಈ ರೀತಿ ತೆರಿಗೆದಾರರ ಹಣವನ್ನು ಪೋಲು ಮಾಡಬಹುದೆ ಎಂದು ಪ್ರಶ್ನಿಸಿದ್ದಾರೆ.
ರೈತರ ಬರ ಪರಿಹಾರಕ್ಕೆ ತಲಾ 2,000 ರೂ. ಕೊಟ್ಟು ಕುರ್ಚಿ ಉಳಿಸಿಕೊಳ್ಳುವ ಕಸರತ್ತಿಗೆ 140 ಕೋಟಿ ರೂ. ಖರ್ಚು ಮಾಡಿದ ಜನದ್ರೋಹಿ ಸರ್ಕಾರ ಎಂದು ಕಿಡಿಕಾರಿದ್ದಾರೆ.
ಗ್ಯಾರೆಂಟಿಗಳಿಗೂ ಹಣವಿಲ್ಲದೆ ಬಾಕಿ
ರೈತರಿಗೂ ಬಾಕಿ, ನಿಮ್ಮ ಗ್ಯಾರೆಂಟಿಗಳಿಗೂ ಹಣವಿಲ್ಲದೆ ಬಾಕಿ, ಯೋಜನೆಗಳಿಗೂ ಬಾಕಿ, ಅಭಿವೃದ್ಧಿಗೂ ಬಾಕಿ, ಈಗ ಮಾಧ್ಯಮಗಳಿಗೂ ಬಾಕಿ.
ರಾಜ್ಯವನ್ನು ಇನ್ನೆಷ್ಟು ಸಾಲದ ಸುಳಿಗೆ ಸಿಲುಕಿಸುವಿರೀ ಎಂದು ಯತ್ನಾಳ್, ಮುಖ್ಯಮಂತ್ರಿ ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಧ್ಯಮಗಳಿಗೆ ನೀಡಿರುವ ಜಾಹೀರಾತು ಹಣವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ, ತಕ್ಷಣವೇ 140 ಕೋಟಿ ರೂ. ಬಿಡುಗಡೆ ಮಾಡುವಂತೆ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ, ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಕೃಷಿ ಸಚಿವರು, ಇಷ್ಟು ಬೃಹತ್ ಮೊತ್ತದ ಬಾಕಿಯಿಂದಾಗಿ ಮಾಧ್ಯಮ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳು ನನ್ನ ಬಳಿ ನಿವೇದಿಸಿಕೊಂಡಿದ್ದಾರೆ.
ಬಾಕಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡಿ
ಬಾಕಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡಿಸಿಕೊಟ್ಟು ಮಾಧ್ಯಮ ಸಂಸ್ಥೆಗಳ ನೆರವಿಗೆ ನಿಲ್ಲುವಂತೆ ಚಲುವರಾಯ ಸ್ವಾಮಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣಾ ಪೂರ್ವ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಶಕ್ತಿ, ಗೃಹಲಕ್ಷ್ಯೀ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳನ್ನು ಅನುಷ್ಟಾನಗೊಳಿಸಿದೆ.
ಈ ಯೋಜನೆಗಳ ಅನುಷ್ಟಾನದ ಸಂದರ್ಭದಲ್ಲೇ ಹೆಚ್ಚು ಪ್ರಚಾರಕ್ಕೆ ಮಾಧ್ಯಮಗಳಲ್ಲಿ ಜಾಹೀರಾತಿಗೆ ಸರ್ಕಾರ ಹೆಚ್ಚು ಹಣ ಬಳಕೆ ಮಾಡಿಕೊಂಡಿದೆ. ಅದರಲ್ಲೂ ಗೃಹ ಲಕ್ಷ್ಮೀ ಯೋಜನೆಯ ಜಾಹೀರಾತಿಗಾಗಿ 32 ಕೋಟಿ ರೂ. ವೆಚ್ಚ ಮಾಡಿದೆ.