ಪರಿಷತ್ ನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಬೆಳಗಾವಿ: ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಶುಚಿ ಯೋಜನೆಗೆ ಮರು ಚಾಲನೆ ನೀಡಲಾಗುತ್ತಿದ್ದು, ಜನವರಿಯಿಂದ ಶಾಲಾ ಹೆಣ್ಣುಮಕ್ಕಳಿಗೆ ನ್ಯಾಪ್ಕಿನ್ ವಿತರಣೆಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದೇ ಮೊದಲ ಬಾರಿಗೆ ಶಾಲೆಗಳಿಗೆ ತೆರಳಿ ನ್ಯಾಪ್ಕಿನ್ ಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದರು.
ಶುಚಿ ಒಂದು ಮಹತ್ವವಾದ ಯೋಜನೆ. ಹೆಣ್ಣುಮಕ್ಕಳಿಗೆ ಇದು ಅತ್ಯಗತ್ಯವಾಗಿದೆ. ಆದರೆ, ಕಳೆದ ನಾಲ್ಕು ವರ್ಷಗಳಿಂದ ಬೇರೆ ಬೇರೆ ಕಾರಣಗಳಿಗೆ ಯೋಜನೆ ಸ್ಥಗಿತವಾಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ಶುಚಿ ಯೋಜನೆಗೆ ಮರುಚಾಲನೆ ನೀಡುತ್ತಿದ್ದೇವೆ. ಈಗಾಗಲೇ ನಾಲ್ಕು ವಿಭಾಗವಾರು ಟೆಂಡರ್ ಆಹ್ವಾನಿಸಿದ್ದು, ಟೆಂಡರ್ ಬಹುತೇಕ ಪ್ರಕ್ರಿಯೇ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
10 ವರ್ಷದಿಂದ 18 ವರ್ಷದೊಳಗಿನ ಸುಮಾರು 19 ಲಕ್ಷ ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ ವಿತರಿಸಲು ಯೋಜಿಸಲಾಗಿದೆ. ಸರ್ಕಾರಿ ಶಾಲೆ ಹಾಗೂ ಹಾಸ್ಟೆಲ್ ಮಕ್ಕಳಿಗೂ ನ್ಯಾಪ್ಕಿನ್ ಗಳನ್ನು ವಿತರಿಸಲಾಗುವುದು. ಈ ಮೊದಲು ಸರ್ಕಾರಿ ಆಸ್ಪತ್ರೆಯ ಮೂಲಕ ನ್ಯಾಪ್ಕಿನ್ ಗಳನ್ನು ವಿತರಿಸಲಾಗುತ್ತಿತ್ತು. ಈ ಬಾರಿ ನೇರವಾಗಿ ಶಾಲೆಗೆ ತೆರಳಿ ವಿದ್ಯಾರ್ಥಿನಿಯರಿಗೆ ನ್ಯಾಪ್ಕನ್ ಗಳನ್ನು ವಿತರಿಸುವಂತೆ ಏಜನ್ಸಿಯವರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
40.50 ಕೋಟಿ ರೂ.ಯೋಜನೆ ಇದಾಗಿದ್ದು, ಸಂಪೂರ್ಣ ಹಣಕಾಸನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ನೆರವು ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ರಾಯೋಗಿಕವಾಗಿ ಮೆನ್ ಸ್ಟ್ರಲ್ ಮುಟ್ಟಿನ ಕಪ್ ಗಳನ್ನು ದಕ್ಷಿಣ ಕನ್ನಡ, ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 15 ಸಾವಿರ ಮುಟ್ಟಿನ ಕಪ್ ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.