ಮಾನದಂಡ ಪರಿಷ್ಕರಣೆ ಪ್ರತ್ರಕ್ಕೆ ಕೇಂದ್ರ ಸರ್ಕಾರದ ಉತ್ತರ ಸಿಕ್ಕಿಲ್ಲ
ಬೆಳಗಾವಿ: ಪ್ರಸ್ತುತ ವರ್ಷ ರಾಜ್ಯ ತೀವ್ರ ಬರಕ್ಕೆ ತುತ್ತಾಗಿದೆ. ಆದರೆ, ಬರ ಘೋಷಿತ ಪಟ್ಟಿಯಲ್ಲಿ ಯಾವ ತಾಲೂಕುಗಳನ್ನು ಸೇರಿಸಬೇಕು ಅಥವಾ ಬಿಡಬೇಕು ಎಂಬ ಆಯ್ಕೆಯ ಸ್ವಾತಂತ್ಯ್ರ ಮುಖ್ಯಮಂತ್ರಿಗಾಗಲಿ, ನನಗಾಗಲಿ ಇಲ್ಲ. ಬದಲಿಗೆ ಕೇಂದ್ರ ಸರ್ಕಾರದ ಮಾನದಂಡದಂತೆ ಬರ ಘೋಷಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಗೆ ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬರ ಘೋಷಣೆಗೆ ಸಂಬಂಧಿಸಿದಂತೆ ಮಾತನಾಡಿದ ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ “ನನ್ನ ಕ್ಷೇತ್ರದಲ್ಲೂ ತೀವ್ರ ಮಳೆ ಕೊರತೆಯಾಗಿದೆ. ರೈತರು ಸಾಕಷ್ಟು ಸಮಸ್ಯೆಗೆ ತುತ್ತಾಗಿದ್ದಾರೆ. ಆದರೆ, ಬರ ಘೋಷಿಸಿಲ್ಲ. ಇದರಿಂದಾಗಿ ರೈತರ ಪ್ರಶ್ನೆಗಳಿಗೆ ನಮ್ಮಿಂದ ಉತ್ತರಿಸಲಾಗುತ್ತಿಲ್ಲ” ಎಂದು ಅಸಮಾಧಾನ ಹೊರಹಾಕಿದರು.
ಶಾಸಕ ಹೆಚ್.ಡಿ. ತಮ್ಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ರಾಜ್ಯದಲ್ಲಿ ಈಗಾಗಲೇ ಎರಡು ಹಂತದಲ್ಲಿ 217 ತಾಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದೆ. ಆದರೆ, ಯಾವ ತಾಲೂಕಿನಲ್ಲಿ ಬರ ಘೋಷಿಸಬೇಕು, ಬೇಡಾ? ಎಂಬ ವಿಚಾರದಲ್ಲಿ ನಮಗೆ ಯಾವುದೇ ಸ್ವಾತಂತ್ಯ್ರವಿಲ್ಲ.
ಈ ವಿಚಾರದಲ್ಲಿ ಕೇಂದ್ರದ ಮಾನದಂಡದಂತೆ ಬರ ಘೋಷಿಸಲಾಗಿದೆ. ಒಂದು ವೇಳೆ ಕೇಂದ್ರದ ನಿಯಮ ಮೀರಿದರೆ, ರಾಜ್ಯದ ಬರ ಘೋಷಣೆಯೇ ಪ್ರಶ್ನಾರ್ಥಕವಾಗುವ ಸಾಧ್ಯತೆಯೂ ಇದೆ” ಎಂದು ಕಳವಳ ವ್ಯಕ್ತಪಡಿಸಿದರು.
6200 ಕಡೆಗಳಲ್ಲಿ ಮಳೆ ಮಾಪನ ಕೇಂದ್ರ
“ಕೇಂದ್ರದ ಮಾನದಂಡದಂತೆ ಬರ ಘೋಷಿಸಲು ಸತತ ಮೂರು ವಾರ ಶೇ.60ಕ್ಕಿಂತ ಹೆಚ್ಚು ಮಳೆ ಕೊರತೆ ಇರಬೇಕು ಮತ್ತು ಶುಷ್ಕ ವಾತಾವರಣ ಇರಬೇಕು. ರಾಜ್ಯದಲ್ಲಿ 6200 ಕಡೆಗಳಲ್ಲಿ ಮಳೆ ಮಾಪನ ಕೇಂದ್ರಗಳನ್ನು ಅಳವಡಿಸಲಾಗಿದೆ. ಈ ಕೇಂದ್ರಗಳಿಂದ ನಿಖರ ಮಾಹಿತಿ ಲಭ್ಯವಾಗುತ್ತಿದೆ.
ಇದರ ಪ್ರಕಾರ ಚಿಕ್ಕಮಗಳೂರು ತಾಲೂಕಿಗೆ ಸಂಬಂಧಿಸಿದಂತೆ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ವಾಡಿಕೆಯ ಮಳೆ 433 ಮಿ.ಮೀ. ಆಗಿದೆ. ಆದರೆ, 667 ಮಿಮೀ ಮಳೆಯಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಳೆ ಕೊರತೆಯಾಗಿರುವುದು ನಿಜ. ಆದರೂ, ಕೇಂದ್ರದ ಮಾನದಂಡದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರ ಘೋಷಣೆ ಸಾಧ್ಯವಾಗಿಲ್ಲ” ಎಂದು ಅವರು ಸ್ಪಷ್ಟೀಕರಣ ನೀಡಿದರು.
ಮಾನದಂಡಗಳ ಪರಿಷ್ಕರಣೆಯಾಗಬೇಕು
ಇದೇ ವೇಳೆ ಕೇಂದ್ರ ಸರ್ಕಾರದ ಬರ ಘೋಷಣೆ ಮಾನದಂಡಗಳ ಬಗ್ಗೆಯೂ ಗಮನ ಸೆಳೆದ ಸಚಿವರು, “ಕೇಂದ್ರ ಸರ್ಕಾರದ ಬರ ಘೋಷಣೆ ಮಾನದಂಡಗಳು ಕಠಿಣವಾಗಿದ್ದು, ಇದರಿಂದ ರೈತರಿಗೆ-ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ. ಈ ಮಾನದಂಡಗಳ ಕಾರಣಕ್ಕೆ ರಾಜ್ಯದ ಅನೇಕ ತಾಲೂಕುಗಳನ್ನು ಬರ ಘೋಷಿತ ಪಟ್ಟಿಗೆ ಸೇರಿಸಲಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಬರೆದ ಪತ್ರಕ್ಕೂ ಉತ್ತರ ಬಂದಿಲ್ಲ” ಎಂದು ಅವರು ಅಸಮಾಧಾನ ಹೊರಹಾಕಿದರು.
“ಬರ ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರದ ಮಾನದಂಡ ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ಪುಟಗಳ ಸುದೀರ್ಘ ಪತ್ರವನ್ನು ಬರೆದಿದ್ದರು. ಆದರೆ, ಈವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ.
ಪರಿಣಾಮ ಕ್ಷೇತ್ರಗಳಲ್ಲಿ ರೈತರ ಪ್ರಶ್ನೆಗಳಿಗೆ ಉತ್ತರಿಸಲು ಶಾಸಕರಿಗೆ ಎಂತಹ ಸಂಕಟ ಪರಿಸ್ಥಿತಿ ಇದೆಯೋ? ಈ ಬಗ್ಗೆ ಶಾಸಕರಿಗೆ ಉತ್ತರಿಸಲು ಸಚಿವನಾಗಿ ನನಗೂ ಸಹ ಅಷ್ಟೇ ಸಂಕಟದ ವಾತಾವರಣ ನಿರ್ಮಾಣವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.