ಸಹಕಾರ ಸಂಘವು ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಿ
ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 75ನೇ ಸಂಸ್ಥಾಪನಾ ದಿನಾಚರಣೆಗೆ ನಗರದಲ್ಲಿಂದು ರಾಜ್ಯಪಾಲರ ಥಾವರ್‌ಚಂದ್ ಗೆಹ್ಲೋಟ್ ಚಾಲನೆ ನೀಡಿದರು.
ರಾಜಭವನದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಂಘದ 75ನೇ ವರ್ಷದ ಅಮೃತ ಸಂಭ್ರಮದ ಲಾಂಚನವನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಹಕಾರ ಸಂಘವು ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಿ ಎಂದು ಶುಭ ಹಾರೈಸಿದರು.
ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿಕೊಡುವಲ್ಲಿ ಪತ್ರಿಕೋದ್ಯಮದ ಪಾತ್ರ ಶ್ಲಾಘನೀಯ
ಪತ್ರಿಕೋದ್ಯಮ ಸಂವಿಧಾನದ 4ನೇ ಅಂಗ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿಕೊಡುವಲ್ಲಿ ಪತ್ರಿಕೋದ್ಯಮದ ಪಾತ್ರ ಶ್ಲಾಘನೀಯ.
ಪತ್ರಕರ್ತರ ಆರ್ಥಿಕಾಭಿವೃದ್ಧಿಗೆ ದೇಶದಲ್ಲೇ ಈ ರೀತಿಯ ಸಂಸ್ಥೆ ಇರುವುದನ್ನು ಶ್ಲಾಘಿಸಿದ ರಾಜ್ಯಪಾಲರು, ಜನಸಾಮಾನ್ಯರಿಗೆ ವಿಮರ್ಶಾತ್ಮಕ ಅನಿಸಿಕೆಗಳ ಜೊತೆಗೆ ಜ್ಞಾನ ಮತ್ತು ಆಲೋಚನೆಗಳನ್ನು ತಲುಪಿಸುವುದು ಪತ್ರಿಕೋದ್ಯಮದ ಪ್ರಮುಖ ಭಾಗವಾಗಿದೆ ಎಂದರು.
ಸಾಮಾಜಿಕ ಕಾಳಜಿ ಮತ್ತು ಸಾರ್ವಜನಿಕ ಹಿತಾಸಕ್ತಿ

ಸಾಮಾಜಿಕ ಕಾಳಜಿ ಮತ್ತು ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಪತ್ರಿಕೋದ್ಯಮ ಅರ್ಥಪೂರ್ಣವಾಗುತ್ತದೆ.
ಕರ್ನಾಟಕ ದೇಶದ ಪ್ರಗತಿಪರ ರಾಜ್ಯ, ಸರ್ವಾಂಗೀಣ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಗುರಿಯೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದೆ.
ಅರ್ಥಪೂರ್ಣ ಕೊಡುಗೆಯನ್ನು ನೀಡುತ್ತಾ ಬಂದಿದ್ದೀರಿ
ಸಾರ್ವಜನಿಕ ಕಲ್ಯಾಣ ನೀತಿಗಳು ಮತ್ತು ಆಡಳಿತದ ಯೋಜನೆಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ನೀವು ರಾಜ್ಯದ ಗುರಿಗಳನ್ನು ತಲುಪಿಸುವಲ್ಲಿ ಅರ್ಥಪೂರ್ಣ ಕೊಡುಗೆಯನ್ನು ನೀಡುತ್ತಾ ಬಂದಿದ್ದೀರಿ.
ಈ ಸಂಘವು ಮತ್ತಷ್ಟು ಅಭಿವೃದ್ಧಿ ಹೊಂದಲಿ ಮತ್ತು ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಪತ್ರಕರ್ತರಿಗೆ ಸೇವೆಯನ್ನು ಒದಗಿಸಲಿ ಎಂದು ಹಾರೈಸಿದರು.
ಈ ವೇಳೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ್ ಪಾಳ್ಯ ಅವರು ಸಂಘದ ಚಟುವಟಿಕೆಗಳ ಬಗ್ಗೆ ರಾಜ್ಯಪಾಲರಿಗೆ ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದೊಡ್ಡ ಬೊಮ್ಮಯ್ಯ, ಖಜಾಂಚಿ ಮೋಹನ್ ಕುಮಾರ್, ನಿರ್ದೇಶಕರಾದ ಎಂ.ಎಸ್. ರಾಜೇಂದ್ರಕುಮಾರ್, ವಿನೋದ್ ಕುಮಾರ್ ಬಿ. ನಾಯ್ಕ್, ರಮೇಶ್ ಹಿರೇಜಂಬೂರು, ಧ್ಯಾನ್ ಪೂಣಚ್ಚ, ನಯನಾ ಎಸ್., ವನಿತಾ ಎನ್., ಕೃಷ್ಣಕುಮಾರ್ ಪಿ.ಎಸ್. ಹಾಗೂ ಕಾರ್ಯದರ್ಶಿ ಕೆಂಪರಾಜು, ಸಿಬ್ಬಂದಿಗಳಾದ ಹೇಮಂತ್ ಕುಮಾರ್, ಅನಿತಾ ಜೋಯಿಸ್, ಆನಂದ್ ಉಪಸ್ಥಿತರಿದ್ದರು.