ಆರು ತಿಂಗಳಲ್ಲಿ ನೂರಾರು ಕೋಟಿ ರೂ. ಮೌಲ್ಯದ ಒತ್ತುವರಿ ಭೂಮಿ ತೆರವು
ಬೆಳಗಾವಿ:ಖಾಸಗಿಯವರಿಂದ ಒತ್ತುವರಿಯಾಗಿರುವ ಸರ್ಕಾರಿ ಭೂಮಿಗಳನ್ನು ತೆರವುಗೊಳಿಸಿ ಮತ್ತೆ ಸರ್ಕಾರದ ಸುಪರ್ದಿಗೆ ಪಡೆಯಲು ಪ್ರತ್ಯೇಕ ಕೋಶ ರಚಿಸುವ ಚಿಂತನೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ವಿಧಾನ ಪರಿಷತ್‌ನಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ಒತ್ತುವರಿ ಕುರಿತಂತೆ ಶಾಸಕ ಯು.ಬಿ. ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒತ್ತುವರಿಯಾಗಿರುವ ಭೂಮಿ ತೆರವಿನ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ಸರ್ಕಾರಿ ಆಸ್ತಿಗಳನ್ನು ರಕ್ಷಿಸಲಾಗುವುದು
ಕಳೆದ ಆರು ತಿಂಗಳಲ್ಲಿ ನೂರಾರು ಕೋಟಿ ರೂ. ಮೌಲ್ಯದ ಸರ್ಕಾರ ಭೂಮಿ ಒತ್ತುವರಿಯನ್ನು ತೆರವು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಒತ್ತುವರಿ ತೆರವಿಗೆ ಪ್ರತ್ಯೇಕ ಕೋಶ ರಚಿಸಲಾಗುವುದು, ಅಲ್ಲದೆ, ಸರ್ಕಾರಿ ಆಸ್ತಿಗಳನ್ನು ರಕ್ಷಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮುಜರಾಯಿ-ವಕ್ಫ್ ಆಸ್ತಿಗಳ ಕಬಳಿಕೆ ಬಗ್ಗೆಯೂ ಸದನದಲ್ಲಿ ಸ್ಪಷ್ಟಪಡಿಸಿದ ಕೃಷ್ಣ ಬೈರೇಗೌಡ ಅವರು, ರಾಜ್ಯದಲ್ಲಿ ಮುಜರಾಯಿ ಹಾಗೂ ವಕ್ಫ್ ಆಸ್ತಿಗಳು ಅಧಿಕ ಸಂಖ್ಯೆಯಲ್ಲಿದೆ. ಹೀಗಾಗಿ ಈ ಹಿಂದೆಯೇ ಆಸ್ತಿಗಳನ್ನು ಸರ್ವೇ ನಡೆಸಿ ಗಡಿ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು ಎಂದರು,
ಆದರೆ, ರೈತರ ಸಮಸ್ಯೆಯೇ ಹೆಚ್ಚಿರುವ ಕಾರಣ ಈ ಬಗ್ಗೆ ಹೆಚ್ಚಿನ ಗಮನ ಕೊಡಲಾಗಲಿಲ್ಲ. ರೈತರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಮೊದಲ ಆದ್ಯತೆ ಎಂದರು.
ಮುಜರಾಯಿ-ವಕ್ಫ್ ಆಸ್ತಿಗಳ ಸರ್ವೇ
ಮುಂದುವರೆದು ಮಾತನಾಡಿದ ಅವರು, ಪ್ರಸ್ತುತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಶೀಘ್ರದಲ್ಲಿ ಮುಜರಾಯಿ-ವಕ್ಫ್ ಆಸ್ತಿಗಳನ್ನು ಸರ್ವೇ ನಡೆಸಿ, ಗಡಿ ಗುರುತಿಸಿ ರಕ್ಷಿಸಲಾಗುವುದು. ಅಲ್ಲದೆ, ಈ ಆಸ್ತಿಗಳನ್ನು ಡಿಜಿಟಲ್ ಡೇಟಾಬೇಸ್ ನಿರ್ವಹಿಸುವಂತೆಯೂ ಸರ್ಕಾರದಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.