ತದನಂತರ ಗಡೀಪಾರು ಮಾಡಲಾಗುವುದು
ಬೆಳಗಾವಿ:ರಾಜ್ಯದಲ್ಲಿಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶೀಯರನ್ನು ಪತ್ತೆ ಹಚ್ಚಿ ಬಿ.ಎಸ್.ಎಫ್ ವಶಕ್ಕೆ ಒಪ್ಪಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶೀಯರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದ್ದು, ತದನಂತರ ಅವರನ್ನು ಬಿ.ಎಸ್.ಎಫ್ ವಶಕ್ಕೆ ಒಪ್ಪಿಸಿ ಗಡೀಪಾರು ಮಾಡಲಾಗುವುದು ಎಂದರು.
ಐದು ಸಾವಿರಕ್ಕೂ ಅಧಿಕ ಮನೆಗಳ ತಪಾಸಣೆ
ನಮ್ಮ ಪೋಲೀಸರು ರಾಜ್ಯಾದ್ಯಂತ ನಲವತ್ತೈದು ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿ ಐದು ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಇದಲ್ಲದೆ, ವಲಸಿಗರು ನೆಲೆಸಿದ್ದಾರೆ ಎಂಬ ಇಪ್ಪತ್ತೆಂಟು ಕೇಂದ್ರಗಳನ್ನು ಗುರುತಿಸಲಾಗಿದ್ದು, ಆ ಕೇಂದ್ರಗಳಲ್ಲೂ ತಪಾಸಣೆ ಮುಂದುವರಿದಿದೆ.
ರಾಜ್ಯದಲ್ಲಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಗಡೀಪಾರು ಮಾಡುವವರೆಗೂ ನಮ್ಮ ಪೊಲೀಸರು ವಿಶೇಷ ಕಾರ್ಯಾಚರಣೆ ಮುಂದುವರಿಸಲಿದ್ದಾರೆ.
ಅಕ್ರಮ ನೆಲೆಸಿರುವ ವಿದೇಶಿ ಪ್ರಜೆಗಳ ಪತ್ತೆ ಕೆಲಸ
ಬಾಂಗ್ಲಾ ಮಾತ್ರವಲ್ಲ, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಇತರ ವಿದೇಶಿಯ ಪ್ರಜೆಗಳನ್ನು ಪತ್ತೆ ಹಚ್ಚುವ ಕೆಲಸವನ್ನು ನಮ್ಮ ಇಲಾಖೆ ಮಾಡುತ್ತಿದೆ. ಅವರ ಪತ್ತೆಯಾದ ನಂತರ ಪೋಲೀಸರು ಮುಂದಿನ ಕಾರ್ಯ ನಡೆಸಲಿದ್ದಾರೆ ಎಂದರು.
ಇದುವರೆಗೂ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಮತ್ತಿತರ ವಿದೇಶೀ ಪ್ರಜೆಗಳ ಮೇಲೆ 768 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಬಾಂಗ್ಲಾ ವಲಸಿಗರ ವಿರುದ್ಧ 53 ಪ್ರಕರಣಗಳಿವೆ.
ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಿದ್ದಾರೆ
ಇದುವರೆಗೂ ನೂರಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಅವರನ್ನು ಹೊರಹಾಕುವ ಕೆಲಸ ಮಾಡಲಾಗಿದೆ, ಜೀವನೋಪಾಯಕ್ಕೆ ವಲಸೆ ಬಂದಿರುವ ಇವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಕೆಲಸ ಮಾಡುತ್ತಿದ್ದಾರೆ.
ಇವರು ನಕಲಿ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಸೃಷ್ಟಿಸಿಕೊಂಡು ಕರ್ನಾಟಕದ ವಿವಿಧ ಭಾಗಗಳಲ್ಲಿ ವಾಸ ಮಾಡುತ್ತಿದ್ದಾರೆ. ಮಧ್ಯವರ್ತಿಗಳ ಮೂಲಕ ರಾಜ್ಯ ಪ್ರವೇಶಿಸಿ ಕೆಲವರು ವಿವಿಧ ಉದ್ದಿಮೆಗಳಲ್ಲಿ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದು, ಹಲವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದರು.
ಹೀಗೆ ವಿದೇಶಿಯರು ಅಕ್ರಮವಾಗಿ ನೆಲೆಸಲು ನೆರವು ನೀಡುತ್ತಿರುವ ಮಧ್ಯವರ್ತಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.