ಬೆಳಗಾವಿ: ಹಳೆಯ ಪಿಂಚಣಿ ಯೋಜನೆ (ಓಪಿಎಸ್) ಜಾರಿಗೆ ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಈ ಸಂಬಂಧ ರಚಿಸಲಾಗಿರುವ ಸಮಿತಿಯನ್ನು 10 ದಿನಗಳೊಳಗೆ ಪುರ‍್ರಚಿಸಿ ಆದೇಶಿಸಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಹೇಳಿದರು.
ವಿಧಾನ ಪರಿಷತ್‌ನಲ್ಲಿ ಸದಸ್ಯರಾದ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಈ ಬಗ್ಗೆ ಅಧ್ಯಯನ ನಡೆಸಲು ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಚುನಾವಣೆಯ ಪ್ರಣಾಳಿಕೆಯಲ್ಲಿ ಓಪಿಎಸ್ ಜಾರಿ
ಚುನಾವಣೆಯ ಪ್ರಣಾಳಿಕೆಯಲ್ಲಿ ಓಪಿಎಸ್ ಜಾರಿ ಮಾಡುವುದಾಗಿ ನೌಕರರಿಗೆ ತಿಳಿಸಿದ್ದು, ಮಾತಿಗೆ ತಕ್ಕಂತೆ ನಡೆಯಬೇಕು ಎಂದು ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಒತ್ತಾಯಿಸಿದರು.
ನೌಕರರು ನಿವೃತ್ತಿಯ ನಂತರ ನಿವೃತ್ತಿ ವೇತನ ಪಡೆಯುವುದು ಅವರಿಗೆ ಸಂವಿಧಾನ ಬದ್ಧವಾಗಿ ನೀಡಿದ ಹಕ್ಕಾಗಿದೆ. ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಜಾರಿಯಿಂದಾಗಿ ಸರ್ಕಾರಿ ನೌಕರಿ ಸಿಕ್ಕರು ನಿವೃತ್ತಿ ವೇಳೆ ಬರೀಗೈಲಿ ಹೋಗುವ ದುಸ್ಥಿತಿ ಬಂದೊದಗಿದೆ.
ನಿವೃತ್ತಿ ನಂತರ ಕುಟುಂಬಗಳು ಕಷ್ಟದ ಜೀವನ ನಡೆಸುವುದು ಯಾವ ನ್ಯಾಯ? ಎಂದು ಸದಸ್ಯರಾದ ಎಸ್.ವಿ.ಸಂಕನೂರ ಅವರು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಸದಸ್ಯರಾದ ಹೇಮಲತಾ ನಾಯಕ ಅವರು, ಸರ್ಕಾರಿ ನೌಕರರಿಂದ ಸೇವೆ ಪಡೆದು ಬಳಿಕ ಕೈಬಿಡುವುದು ಸರಿಯಲ್ಲ. ಹತ್ತಾರು ವರ್ಷ ಸರ್ಕಾರಿ ಸೇವೆ ಮಾಡ, ಜನ ಸೇವೆ ಮಾಡಿದ ಬಳಿಕ ಮನೆಗೆ ಸುಮ್ಮನೆ ಹೋಗುವುದು ಸರಿಯಲ್ಲ. ನೌಕರರಿಗೆ ನಿವೃತ್ತಿ ವೇತನ ನೀಡುವ ಕಾರ್ಯ ಅತ್ಯಗತ್ಯವಾಗಿ ಆಗಬೇಕು ಎಂದು ತಿಳಿಸಿದರು.
ಓಪಿಎಸ್ ಜಾರಿಗೆ ಕಾಲಮಿತಿ ನಿಗದಿಪಡಿಸಬೇಕು. ಈ ಯೋಜನೆಯ ಜಾರಿ ಅನುಷ್ಠಾನ ಹಿನ್ನೆಲೆಯಲ್ಲಿ ಸಮಿತಿಗೆ ನೀಡಿರುವ ಕಾಲಾವಧಿ ಎಷ್ಟು ಎಂಬುದನ್ನು ಹಾಗೂ ಸಮಿತಿಯ ಕಾರ್ಯವ್ಯಾಪ್ತಿ ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಂಕನೂರ ಅವರು ಪಟ್ಟುಹಿಡಿದರು.
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೂ ಸಹ ಓಪಿಎಸ್ ಜಾರಿಯಾಗಬೇಕು ಎನ್ನುವ ವಿಷಯವು ಓಪಿಎಸ್ ಜಾರಿ ಸಂಬಂಧ ರಚಿಸಲಾಗಿರುವ ಸಮಿತಿಯ ಕಾರ್ಯವ್ಯಾಪ್ತಿಗೊಳಪಡಬೇಕು ಎಂದು ಸದಸ್ಯರಾದ ಮರಿತಿಬ್ಬೇಗೌಡ ಅವರು ಸಲಹೆ ಮಾಡಿದರು.
ಹೊಸ ಪಿಂಚಣಿ ಯೋಜನೆ ರದ್ಧುಗೊಳಿಸಿ
ಅನುದಾನಿತ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರು ಸಹ ನಿವೃತ್ತಿ ವೇತನದಿಂದ ವಂಚಿತರಾಗಬಾರದೆಂಬುದು ನಮ್ಮ ಕಾಳಜಿಯಾಗಿದೆ. ಹೊಸ ಪಿಂಚಣಿ ಯೋಜನೆಯನ್ನು ರದ್ಧುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು ಎನ್ನುವ ಮನವಿಯನ್ನು ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಮರು ಪರಿಶೀಲಿಸುತ್ತಿದ್ದು, ನೌಕರರ ನಿರೀಕ್ಷೆಯಂತೆ ಯೋಜನೆಯ ಜಾರಿಗೆ ಭಾಗಶಃ ಪ್ರಯತ್ನವಾಗಿದೆ ಎಂದು ಕೃಷ್ಣ ಭೈರೇಗೌಡ ಅವರು ತಿಳಿಸಿದರು.