ಪೌರಾಡಳಿತ ಸಚಿವ ರಹೀಂಖಾನ್ ಭರವಸೆ
ಬೆಳಗಾವಿ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಸಾಲ ಪಡೆಯಲು ಆಗಿರುವ ಅಡ್ಡಿಯನ್ನು ಎರಡು ತಿಂಗಳಲ್ಲಿ ಪರಿಹರಿಸುವುದಾಗಿ ಪೌರಾಡಳಿತ ಸಚಿವ ರಹೀಂಖಾನ್ ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಸತೀಶ್ ಸೈಲ್ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆ ನಿರ್ಮಿಸುವವರಿಗೆ ಫಾರಂ-3 ಕೊಡುವ ಕೆಲಸವಾಗಬೇಕು. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಇದು ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ದೂರುಗಳಿದ್ದು, ಇದನ್ನು ಎರಡು ತಿಂಗಳಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ಸಮಸ್ಯೆ ನಿವಾರಣೆಗೆ ಸಚಿವ ಸಂಪುಟ ಉಪಸಮಿತಿ ರಚನೆ
ರಾಜ್ಯಾದ್ಯಂತ ಗಂಭೀರ ಸ್ವರೂಪದ ಸಮಸ್ಯೆಯಾಗಿದೆ. ಇದರ ನಿವಾರಣೆಗೆ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಈಗಾಗಲೇ ಎರಡು ಸಭೆಗಳು ನಡೆದಿವೆ, ಮುಂದಿನ ಏಳೆಂಟು ದಿನಗಳಲ್ಲಿ ಮೂರನೇ ಸಭೆ ನಡೆಯಲಿದೆ. ಅಲ್ಲಿ ಸೂಕ್ತ ತೀರ್ಮಾನ ತೆಗೆದುಕೊಂಡು ಬಿಬಿಎಂಪಿಯ ಮಾದರಿಯಲ್ಲಿ ’ಬಿ’ ಖಾತಾ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.
ಈ ಹಿಂದೆ ಹಳೆಯ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಯೋಜಿತ ನಕ್ಷೆಗಳಿರಲಿಲ್ಲ. ಫಾರಂ-ಸಿ ನೀಡಲು ಯೋಜಿತ ನಕ್ಷೆ, ನಿರಪೇಕ್ಷಣಾ ಪತ್ರ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಅವುಗಳು ಲಭ್ಯವಿಲ್ಲದ ಕಾರಣ ಸಮಸ್ಯೆಯಾಗಿದೆ. ಶೀಘ್ರದಲ್ಲೇ ನಿರ್ಧಾರ ತೆಗೆದುಕೊಂಡು 2 ತಿಂಗಳೊಳಗಾಗಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು.