ನಾಳೆ ತುರ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
ಬೆಂಗಳೂರು: ಪಕ್ಷ ವಿಭಜಿಸಲು ಹೊರಟಿರುವ ಕಾಂಗ್ರೆಸ್ ಷಡ್ಯಂತ್ರಕ್ಕೆ ಕಡಿವಾಣ ಹಾಕಲು ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ನಾಳೆ ತುರ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದಿದ್ದಾರೆ.
ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿರುವುದು ಜೆಡಿಎಸ್‌ನಲ್ಲಿ ಒಂದು ವರ್ಗಕ್ಕೆ ಅಸಮಾಧಾನವಿದೆ, ಇದರ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ.
ಲಾಭ ಪಡೆಯಲು ಕಾಂಗ್ರೆಸ್ ತಂತ್ರ
ವಿಧಾನಸಭೆಯಲ್ಲಿ ಜೆಡಿಎಲ್‌ಪಿಯನ್ನೇ ವಿಭಜಿಸಿ ಒಂದಷ್ಟು ಶಾಸಕರನ್ನು ಪ್ರತ್ಯೇಕವಾಗಿ ಕೂರಿಸಿ ಲಾಭ ಪಡೆಯಲು ಕಾಂಗ್ರೆಸ್ ತಂತ್ರ ರೂಪಿಸಿತ್ತು.
ಪ್ರತ್ಯೇಕವಾಗಿ ಶಾಸಕರು ಕುಳಿತುಕೊಳ್ಳುವುದರಿಂದ ಅವರ ಸದಸ್ಯತ್ವಕ್ಕೆ ಕುಂದು ಬರುವುದಿಲ್ಲ, ಉಪಚುನಾವಣೆ ಎದುರಿಸುವ ಪ್ರಮೇಯವೂ ಎದುರಾಗುವುದಿಲ್ಲ, ಆ ಗುಂಪು ಸ್ವತಂತ್ರವಾಗಿ ಇರುವುದರಿಂದ ಆಡಳಿತ ಕಾಲದಲ್ಲಿ ಸಮಸ್ಯೆ ಎದುರಾದಾಗ ಕಾಂಗ್ರೆಸ್ ಬೆಂಬಲಿಸಬಹುದು.
ಸಮಯ ನೊಡಿ ಅವರನ್ನು ಹೊರತರುತ್ತೇವೆ
ಈ ಕಾರಣದಿಂದ ಕಾಂಗ್ರೆಸ್ ದೊಡ್ಡ ಷಡ್ಯಂತ್ರವನ್ನೇ ನಡೆಸಿತ್ತು, ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಇದೇ ಉದ್ದೇಶದಿಂದ ಜೆಡಿಎಸ್‌ನ ಮೂರನೇ ಎರಡು ಭಾಗದಷ್ಟು ಸದಸ್ಯರು ಹೊರ ಬರಲು ಸಿದ್ಧರಿದ್ದಾರೆ, ಸಮಯ ನೊಡಿ ಅವರನ್ನು ಹೊರತರುತ್ತೇವೆ ಎಂದಿದ್ದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಂಡು, ಅಮಾನತುಗೊಂಡಿರುವ ಸಿ.ಎಂ. ಇಬ್ರಾಹಿಂ ಹಾಗೂ ಕೇರಳ ಘಟಕದ ಕೆಲವರನ್ನು ಮುಂದಿಟ್ಟುಕೊಂಡು ಈ ಸಂಚು ರೂಪಿಸಿತ್ತು.
ಪ್ರತಿಪಕ್ಷಗಳ ಸಂಖ್ಯಾಬಲ ಮತ್ತಷ್ಟು ಕುಗ್ಗಿಸುವುದು
ಪಕ್ಷ ವಿಭಜಿಸಿ ಜೆಡಿಎಸ್‌ನ 19 ಶಾಸಕರಲ್ಲಿ ಕೆಲವರನ್ನು ಸೆಳೆದು ಅವರನ್ನು ವಿಧಾನಸಭೆಯಲ್ಲಿ ಪ್ರತ್ಯೇಕ ಗುಂಪಾಗಿ ಕೂರಿಸಿ ಅವರ ಬೆಂಬಲ ಪಡೆದು ತಮ್ಮ ಬಲ ಹೆಚ್ಚಿಸಿಕೊಳ್ಳುವುದು ಹಾಗೂ ಪ್ರತಿಪಕ್ಷಗಳ ಸಂಖ್ಯಾಬಲವನ್ನು ಮತ್ತಷ್ಟು ಕುಗ್ಗಿಸುವುದು ಕಾಂಗ್ರೆಸ್ ಮುಖಂಡರ ಉದ್ದೇಶವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜೆಡಿಎಸ್ ಶಾಸಕರನ್ನು ಸಂಪರ್ಕಿಸಿ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದರೆ, ಕೆಪಿಸಿಸಿ ಅಧ್ಯಕ್ಷರಂತೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವು ಶಾಸಕರನ್ನು ನೇರವಾಗಿ ಅವರ ಮನೆಗೇ ಭೇಟಿ ನೀಡಿ ಆಹ್ವಾನಿಸಿದ್ದಾರೆ.
ಜೆಡಿಎಸ್‌ನ 19 ವಿಧಾನಸಭಾ ಶಾಸಕರಲ್ಲಿ ಮೈತ್ರಿ ವಿರೋಧಿಸಿ ಈಗಾಗಲೇ ಗುರುಮಿಟ್ಕಲ್‌ನ ಶರಣಗೌಡ ಕಂದಕೂರ್ ದೂರ ಉಳಿದಿದ್ದಾರೆ.
ಇದರ ಸುಳಿವು ಅರಿತ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಪಕ್ಷ ನಿಯಮಾವಳಿ ಪ್ರಕಾರ ನಾಳೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಪಕ್ಷದ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಕರೆದಿದ್ದಾರೆ.
ಸಭೆಗೆ 21 ಮಂದಿ ಪ್ರಮುಖ ಪದಾಧಿಕಾರಿಗಳು
ಸಭೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಶಿವಕುಮಾರ್, ಮೊಹಮ್ಮದ್ ಜಫರುಲ್ಲಾ ಖಾನ್, ಪಶ್ಚಿಮ ಬಂಗಾಳದ ರಾಜ್ಯಾಧ್ಯಕ್ಷ ಪುನೀತ್ ಕುಮಾರ್ ಸಿಂಗ್, ಹರಿಯಾಣ ಘಟಕದ ಜೋರಾ ಸಿಂಗ್, ಪಂಜಾಬ್ ಘಟಕದ ಅವತಾರ್ ಸಿಂಗ್, ಅಲ್ಲಿಯವರೇ ಆದ ಅಶೋಕ್ ಕುಮಾರ್, ಜಮ್ಮು-ಕಾಶ್ಮೀರದ ರಾಮ್ ರತನ್ ಶರ್ಮ, ಉತ್ತರಾಖಂಡ್‌ನಿಂದ ಸುರೇಶ್‌ದಾಸ್, ಮಹಾರಾಷ್ಟ್ರದ ಮಹಮ್ಮದ್ ಅಜ್ಮಲ್ ಖಾನ್, ಎನ್.ಎಚ್. ಕಠಾರಿಯಾ, ಎನ್.ಎಚ್. ಶೆವಾಲೆ ಸೇರಿದಂತೆ ದೆಹಲಿ, ತಮಿಳುನಾಡು, ಬಿಹಾರ್, ಗುಜರಾತ್, ಉತ್ತರ ಪ್ರದೇಶದ 21 ಮಂದಿ ಪ್ರಮುಖ ಪದಾಧಿಕಾರಿಗಳು ಆಗಮಿಸಲಿದ್ದಾರೆ.
ಇವರಲ್ಲದೆ, ಪಕ್ಷದ ವತಿಯಿಂದ ರಾಜ್ಯ ವಿಧಾನಸಭೆ, ಪರಿಷತ್ತಿನ ಮಾಜಿ ಸದಸ್ಯರುಗಳು ಮತ್ತು ಮುಖಂಡರಿಗೂ ಆಹ್ವಾನ ನೀಡಲಾಗಿದೆ.
ನಾಳಿನ ಸಭೆಯಲ್ಲಿ ಎನ್‌ಡಿಎ ಮೈತ್ರಿ ಕೂಟದ ನಂತರ ಪಕ್ಷ ಸಂಘಟನೆ ಕುರಿತು ಚರ್ಚೆ, ಐದು ರಾಜ್ಯಗಳ ವಿಧಾನಸಭಾ ಫಲಿತಾಂಶದ ಅವಲೋಕನ, ಅಲ್ಪಸಂಖ್ಯಾತರು ಪಕ್ಷದಿಂದ ದೂರವಾದ ನಂತರ ಮುಂದಿನ ನಡೆ ಹೇಗಿರಬೇಕು ಎಂಬ ಬಗ್ಗೆ ಚರ್ಚೆ ಆಗಲಿದೆ.
ರಾಷ್ಟ್ರೀಯ ಕಾಂಗ್ರೆಸ್‌ನ ಹುನ್ನಾರ ತಪ್ಪಿಸಲು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸುವುದಲ್ಲದೆ, ಪಕ್ಷ ವಿಭಜನೆಗೆ ಮುಂದಾಗಿರುವ ಅಮಾನತುಗೊಂಡ ಸಿ.ಎಂ. ಇಬ್ರಾಹಿಂ ಮತ್ತು ಕೇರಳ ಘಟಕದ ಕೆಲವು ಪದಾಧಿಕಾರಿಗಳನ್ನು ಪಕ್ಷದಿಂದ ಉಚ್ಛಾಟಿಸುವ ನಿರ್ಣಯ ಕೈಗೊಳ್ಳಲಿದ್ದಾರೆಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಖಾಯಂ
ಇದೇ ಸಂದರ್ಭದಲ್ಲಿ ಜೆಡಿಎಸ್‌ನ ಹಂಗಾಮಿ ರಾಜ್ಯಾಧ್ಯಕ್ಷರಾಗಿರುವ ಕುಮಾರಸ್ವಾಮಿ ಅವರನ್ನು ಅದೇ ಸ್ಥಾನದಲ್ಲಿ ಖಾಯಂಗೊಳಿಸುವುದು ಇದರಲ್ಲಿ ಸೇರಿದೆ.