ರಾಷ್ಟ್ರಾದ್ಯಂತ 44 ಕಡೆ ದಾಳಿ ಒಟ್ಟು 13 ಮಂದಿ ವಶಕ್ಕೆ
ಬೆಂಗಳೂರು:ರಾಷ್ಟ್ರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಶಂಕಿತ ಭಯೋತ್ಪಾದಕನನ್ನು ಇಂದು ನಗರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದನಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಎನ್‌ಐಎ ಇಂದು ರಾಷ್ಟ್ರಾದ್ಯಂತ 44 ಕಡೆ ಏಕಕಾಲದಲ್ಲಿ ದಾಳಿ ನಡೆಸಿ 13 ಮಂದಿ ಶಂಕಿತ ಭಯೋತ್ಪಾಕರನ್ನು ಬಂಧಿಸಿದೆ.
ಟ್ಯಾನರಿ ರಸ್ತೆಯಲ್ಲಿ ಶಾಲೆ ನಡೆಸುತ್ತಿದ್ದ
ಮುಂಬೈ ಮೂಲದ ಶಂಕಿತ ವ್ಯಕ್ತಿ ಹಲವು ವರ್ಷಗಳ ಹಿಂದೆ ನಗರಕ್ಕೆ ಆಗಮಿಸಿ, ಟ್ಯಾನರಿ ರಸ್ತೆಯಲ್ಲಿ ಶಾಲೆ ನಡೆಸುತ್ತಿದ್ದ, ಈತನ ಪತ್ನಿ ವೈದ್ಯೆಯಾಗಿದ್ದು ಚಿಕಿತ್ಸಾಲಯ ಹೊಂದಿದ್ದಳು.
ಆರೋಪಿ ಐಎಸ್ ಜೊತೆ ಸಂಪರ್ಕ ಇರಿಸಿಕೊಂಡಿದ್ದಲ್ಲದೆ, ಒಂದು ಸಮುದಾಯಕ್ಕೆ ಸೇರಿದ ಯುವಕರನ್ನು ಪ್ರಚೋಧನಕಾರಿ ಭಾಷಣಗಳ ಮೂಲಕ ಸಂಘಟನೆಗೆ ಸೆಳೆಯುತ್ತಿದ್ದ ಎಂದು ಆರೋಪಿಸಲಾಗಿದೆ.
ಅಲ್-ಖೈದಾ ಮತ್ತು ಐಎಸ್ ಸೇರಿದಂತೆ ನಿಷೇಧಿತ ಭಯೋತ್ಪಾದನಾ ಸಂಘಟನೆಗಳ ಜೊತೆ ಸಂಪರ್ಕ ಹೊಂದಿ ಇದರೊಂದಿಗೆ ಸೇರುವಂತೆ ಪ್ರಚೋಧಿಸುತ್ತಿದ್ದ.
16 ಲಕ್ಷ ರೂ. ನಗದು, ಕೆಲವು ದಾಖಲೆಗಳ ವಶ
ಆರೋಪಿಯನ್ನು ಅಲಿ ಅಬ್ಬಾಸ್ ಎಂದು ಗುರುತಿಸಲಾಗಿದ್ದು, ಉರ್ದು ಶಾಲೆ ನಡೆಸುವ ಈತನಿಂದ ಲ್ಯಾಪ್‌ಟ್ಯಾಪ್, ಮೊಬೈಲ್ ಫೋನ್, 16 ಲಕ್ಷ ರೂ. ನಗದು ಹಾಗೂ ಕೆಲವು ದಾಖಲೆಗಳನ್ನು ಎನ್‌ಐಎ ವಶ ಪಡಿಸಿಕೊಂಡಿದೆ.
ಸ್ಥಳೀಯರ ಪ್ರಕಾರ, ಅಬ್ಬಾಸ್ ಕೆಲವು ವರ್ಷಗಳ ಹಿಂದೆ ಮುಂಬೈನಿಂದ ಆಗಮಿಸಿದ್ದು, ಟ್ಯಾನರಿ ರಸ್ತೆಯಲ್ಲಿ ವಾಸವಿದ್ದು, ಎಲ್ಲರೊಂದಿಗೂ ಸೌಮ್ಯದಿಂದ ಇರುತ್ತಿದ್ದ, ಯಾರೊಂದಿಗೂ ಹೆಚ್ಚು ಬೆರೆಯತ್ತಿರಲಿಲ್ಲ.
ಸ್ಥಳೀಯರ ವಾಟ್ಸ್ ಆಪ್ ಗ್ರೂಪ್ ಮಾಡುತ್ತಿದ್ದ
ಅಂಗಡಿ-ಮುಂಗಟ್ಟುಗಳಿಗೂ ಹೆಚ್ಚಾಗಿ ಹೋಗುತ್ತಿರಲಿಲ್ಲ. ಉರ್ದು ಶಾಲೆ ನಡೆಸುವ ಜೊತೆಗೆ ಸ್ಥಳೀಯರನ್ನು ಸೇರಿಸಿಕೊಂಡು ವಾಟ್ಸ್ ಆಪ್ ಗ್ರೂಪ್ ಮಾಡುತ್ತಿದ್ದ.
ಪ್ರಚೋಧನೆ ನೀಡುವ ಹೇಳಿಕೆಗಳನ್ನು ಕಳುಹಿಸುತ್ತಿದ್ದ
ಈ ಗ್ರೂಪ್‌ನಲ್ಲಿ ತನ್ನ ಪರವಾಗಿ ಮಾತನಾಡುವವರನ್ನು ಮತ್ತೊಂದು ಗುಂಪಿಗೆ ಸೇರಿಸಿ ನಂತರ ಅದರ ಮೂಲಕ ಪ್ರಚೋಧನೆ ನೀಡುವ ಹೇಳಿಕೆಗಳನ್ನು ಕಳುಹಿಸುತ್ತಿದ್ದ.
ತುಂಬಾ ಹತ್ತಿರದವರಿಗೆ ವಾಟ್ಸ್ ಆಪ್ ಉಪಯೋಗಿಸಬೇಡಿ ಅದರ ಬದಲು, ಸುರಕ್ಷತೆಗಾಗಿ ಟೆಲಿಗ್ರಾಫ್ ಬಳಸುವಂತೆ ಪ್ರೇರೇಪಿಸುತ್ತಿದ್ದ.
ತನಿಖಾಧಿಕಾರಿಗಳು ಬೆಳ್ಳಂ ಬೆಳಗ್ಗೆಯಿಂದಲೇ ಈ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬೆಂಗಳೂರು ಅಷ್ಟೇ ಅಲ್ಲದೆ, ಮಹಾರಾಷ್ಟ್ರದ 43 ಕಡೆ ಎನ್‌ಐಎ ಏಕಕಾಲಕ್ಕೆ ದಾಳಿ ನಡೆಸಿ ಶಂಕಿತರನ್ನು ವಶಕ್ಕೆ ಪಡೆದಿದೆ.