ಬೆಂಗಳೂರು: ಮಸಾಲೆ ಬೆರೆತ ಆಹಾರ ಸೇವಿಸುವುದು ಬಹುತೇಕರಿಗೆ ಇಷ್ಟ. ಅದರಲ್ಲೂ ಹಸಿ ಮೆಣಸಿನ ಕಾಯಿ ಸೇರಿಸಿ ತಯಾರಿಸಿದ ಆಹಾರವನ್ನೇ ಹಲವರು ಅಪೇಕ್ಷೆ ಪಡುತ್ತಾರೆ. ಇದು ತಪ್ಪಲ್ಲ. ಇಷ್ಟಕ್ಕೆ ತಕ್ಕಂತೆ ಯಾರು ಬೇಕಾದರೂ ತಿನ್ನಬಹುದು. ಅಡ್ಡಿಯಿಲ್ಲ
.ನಿರಂತರವಾಗಿ ಅಗತ್ಯಕ್ಕಿಂತ ಹೆಚ್ಚು ಈ ರೀತಿಯ ಆಹಾರ ಸೇವನೆ ಮಾಡಿದರೆ, ಆರೋಗ್ಯ ಏರುಪೇರು ಆಗುವುದು ಸಹಜ. ಅದಕ್ಕೆ ಹಿರಿಯರು ಹೇಳುವುದು ಅಮೃತವಾದರೂ ಅತಿಯಾಗಿ ಸೇವಿಸಬಾರದು; ಮಿತಿಯಾಗಿ ತಿನ್ನಬೇಕು ಎಂದು.ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಬಹಳಷ್ಟು ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕಡಿಮೆ.
ಊಟ ಬಲ್ಲವನಿಗೆ ರೋಗವಿಲ್ಲ
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ಸತ್ಯ. ಏಕೆಂದರೆ, ಪ್ರತಿಯೊಂದು ಆಹಾರ ಪದಾರ್ಥವೂ ಒಬ್ಬರಿಂದ ಇನ್ನೊಬ್ಬರಿಗೆ ಒಗ್ಗುವಿಕೆಯಲ್ಲಿ ವ್ಯತ್ಯಾಸವಿರುತ್ತದೆ. ಬಳ್ಳಾರಿ ಸುತ್ತಮುತ್ತಲ ಭಾಗದವರು ಮೆಣಸಿನಕಾಯಿ ಹೆಚ್ಚಾಗಿ ಬಳಸುತ್ತಾರೆ. ಅದು ಅವರ ದೇಹ ಪ್ರಕೃತಿಗೆ ಒಗ್ಗಿರುತ್ತದೆ. ಪ್ರತಿಕೂಲ ಪರಿಣಾಮ ಬೀರುವುದಿಲ್ಲ.
ಆದರೆ, ಬೆಂಗಳೂರು ಸುತ್ತಮುತ್ತಿಲಿನ ಜನರು ಆ ಪ್ರಮಾಣದಲ್ಲಿ ಮೆಣಸಿನಕಾಯಿ ತಿನ್ನಲಾಗದು. ಗಮನಿಸಬೇಕಾದ ಅಂಶವೆಂದರೆ, ಪ್ರತಿಯೊಬ್ಬರೂ ಅವರವರ ದೇಹ ಪ್ರಕೃತಿಗೆ ಒಗ್ಗುವ ಆಹಾರ ಸೇವಿಸುವುದು ಒಳ್ಳೆಯದು, ಅದರಲ್ಲೂ ಮನೆಯಲ್ಲೇ ಸಿದ್ಧವಾದ ತಾಜಾ ಆಹಾರ. ಆದಷ್ಟೂ ಹೋಟೆಲ್ ಊಟ ದೂರ ಇಟ್ಟಷ್ಟು ಒಳ್ಳೆಯದು.

ಮೂಲವ್ಯಾಧಿ, ಮೊಳೆ ರೋಗ, ಪೈಲ್ಸ್ ಎಂದು ಕರೆಯುವ ರೋಗದ ಯಾತನೆ ಅನುಭವಿಸಿದವರಿಗೆ ಗೊತ್ತು. ಯಾರಿಗೂ ಹೇಳಲಾಗದೆ ಪರಿತಪಿಸಬೇಕು. ಆಯುರ್ವೇದ, ಆಲೋಪತಿ ಸೇರಿದಂತೆ ವಿವಿಧ ವೈದ್ಯ ಪದ್ಧತಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ.ಮನೆ ಮದ್ದು ಎಂದು ಕರೆಯುವ ಹಲವು ಪದಾರ್ಥಗಳಿಂದಲೂ ಮೂಲವ್ಯಾಧಿಯನ್ನು ನಿಯಂತ್ರಿಸಬಹುದು. ನಮ್ಮ ಹಿರಿಯರು ತಲೆಮಾರುಗಳಿಂದ ಮನೆ ಮದ್ದನ್ನೇ ಬಳಕೆ ಮಾಡುತ್ತಾ ಬಂದಿದ್ದರು.
ನಮ್ಮ ಸುತ್ತಮುತ್ತ ಅದರಲ್ಲೂ ನಿತ್ಯ ನೋಡುವ ವಸ್ತುವಿನಿಂದ ಇದಕ್ಕೆ ಪರಿಹಾರ ಸಿಗುವುದಾದರೆ ಯಾರು ಬೇಡ ಎನ್ನುತ್ತಾರೆ.‘ಮುಟ್ಟಿದರೆ ಮುನಿ’ ಎಲ್ಲರಿಗೂ ಚಿರಪರಿಚಿತ. ಇದರ ಸೊಪ್ಪನ್ನು ನಿತ್ಯ ವಾರದ ಕಾಲ ಸೇವನೆ ಮಾಡಿದರೆ ಮೂಲವ್ಯಾಧಿ ದೂರವಾಗಲಿದೆ ಎಂದು ಬಹಳಷ್ಟು ಮಂದಿ ಹೇಳುವುದುಂಟು.
ಇದರಿಂದ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎನ್ನುವವರು ಇಲ್ಲದಿಲ್ಲ. ಯಾವುದೇ ಆಹಾರ, ಔಷಧವಾದರೂ ಸ್ವಯಂ ನಿರ್ಧಾರ ಮಾಡಿ ಬಳಸುವುದು ಸರಿಯಲ್ಲ. ಪರಿಣಿತರ, ವೈದ್ಯರ ಸೂಕ್ತ ಸಲಹೆ ಪಡೆದು ಉಪಯೋಗಿಸುವುದು ಅತ್ಯತ್ತಮ.
ಮೂಲವ್ಯಾಧಿಗೆ ಮೆಣಸಿನಕಾಯಿ ಮಾತ್ರವಲ್ಲ, ಕೋಳಿ ಮಾಂಸ, ಮೇಕೆ ಮಾಂಸ, ಮೀನು ಸೇರಿದಂತೆ ದೇಹದ ಉಷ್ಣತೆ ಹೆಚ್ಚು ಮಾಡುವ ಆಹಾರ ಪದಾರ್ಥಗಳು ಕಾರಣ ಎಂದು ಹೇಳಲಾಗುತ್ತದೆ. ಇದು ಅಂತರ್ಜಾಲದಲ್ಲಿ ದೊರೆಯುವ ಮಾಹಿತಿಯನ್ನು ಆಧರಿಸಿದ್ದಾಗಿದೆ.

2 comments
ಇದು ನಿಜ ಕೂಡ. ಮೂಲವ್ಯಾಧಿಗೆ ಉತ್ತಮ ಮದ್ದು ಮುಟ್ಟಿದರೆ ಮುನಿ ಗಿಡ. ತಿನ್ನಲು ಹುಣಿಸೆ ಸೊಪ್ಪಿನ ರುಚಿ ಇರುತ್ತೆ. ಕುರಿಗಳು ಹೆಚ್ಚು ತಿನ್ನುವ ಆಹಾರ ಕೂಡ ಹೌದು. ಫೈಲ್ಸ, ಫಿಸ್ತುಲಾ ಅಥವಾ ಮಲಬದ್ಧತೆಗೂ ಕೂಡ ಬಳಸಬಹುದು. ದಿನಲ್ಕೆ ಎರಡುರಿಂದ ಮೂರು ಭಾರೀ ಬಳಸಿದೆ ತಕ್ಷಣ ಪರಿಹಾರ ದೊರೆಯುತ್ತದೆ.
ಹಳ್ಳಿಗಳಲ್ಲಿ ತೊಟದ ಬದಿ, ಇತರೇ ಸ್ಥಳಗಳಲ್ಲಿ ದೊರೆಯುತ್ತದೆ. ನಗರಗಳಲ್ಲಿ ತುಳಸಿ ಗಿಡದ ರೀತಿಯಲ್ಲಿ ಫಾಟ್ ಗಳಲ್ಲಿ ತಾಜಾ ಮುಟ್ಟುದರೆ ಮುನಿ ಗಿಡ ಬೆಳೆಸಿಕೊಳ್ಳಬಹುದು