ಪರ್ಯಾಯ ಸಭೆಯಲ್ಲಿ ಪದಾಧಿಕಾರಿಗಳ ನೇಮಕ
ಬೆಂಗಳೂರು:ಉಚ್ಛಾಟನೆಗೊಂಡ ನಾಯಕರು ಇಂದು ಪರ್ಯಾಯ ಸಭೆ ನಡೆಸಿ ’ಜೆಡಿಎಸ್’ ನಮ್ಮದೇ ಎಂದಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಂಡಿರುವ ಸಿ.ಎಂ ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿರುವುದಲ್ಲದೆ, ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರನ್ನು ಉಚ್ಛಾಟಿಸಿ, ಆ ಹುದ್ದೆಗೆ ಸಿ.ಕೆ. ನಾಣು ಅವರನ್ನು ನೇಮಿಸಲಾಗಿದೆ.
ಒಂದು ಸಾಲಿನ ನಿರ್ಣಯ
ಸಭೆಯಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿ, ಒಂದು ಸಾಲಿನ ನಿರ್ಣಯ ಅಂಗೀಕರಿಸಿ, ತೆಲಂಗಾಣ ಜೆಡಿಎಸ್ ಅಧ್ಯಕ್ಷ ಸೂರಿ ಮಾಡಿದ ಘೋಷಣೆಗೆ ಸಭೆ ಸರ್ವ ಸಮ್ಮತಿ ವ್ಯಕ್ತಪಡಿಸಿತು.
ಕಳೆದ ಶನಿವಾರವಷ್ಟೇ ದೇವೇಗೌಡರು ತುರ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದು, ನಾಣು ಮತ್ತು ಇಬ್ರಾಹಿಂ ಅವರನ್ನು ಉಚ್ಛಾಟನೆ ಮಾಡಿದ್ದರು.
ಇದಕ್ಕೆ ಬಗ್ಗದ ಉಚ್ಛಾಟಿತ ನಾಯಕರು ತಮ್ಮದೇ ನಿಜವಾದ ಜೆಡಿಎಸ್ ಎಂದು ಹೇಳಿಕೊಂಡು, ಹೊಸ ಪದಾಧಿಕಾರಿಗಳನ್ನೂ ನೇಮಕ ಮಾಡಿಕೊಂಡಿದ್ದಾರೆ.
ಕೋಮುವಾದಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದೊಂದಿಗೆ ಮೈತ್ರಿ
ದೇವೇಗೌಡರು ಪಕ್ಷವನ್ನು ಕೋಮುವಾದಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದೊಂದಿಗೆ ಮೈತ್ರಿ ಮಾಡಿಕೊಂಡಿರುವುದಕ್ಕೇ ಈ ನಿರ್ಣಯ ಎಂದಿದ್ದಾರೆ.
ಘೋಷಿತ ಅಧ್ಯಕ್ಷ ನಾಣು, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತ್ಯತೀತ ಜನತಾ ದಳ ಸಿದ್ಧಾಂತದ ಮೇಲೆ ನಿಂತಿರುವ ಪಕ್ಷ ಅದು ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪಾಲಿಸುವ ಪಕ್ಷ.
ಗಾಂಧೀಜಿಯನ್ನು ವಿರೋಧಿಸುವವರೊಂದಿಗೆ ಜೆಡಿಎಸ್ ಸಖ್ಯ
ಆದರೆ, ಗಾಂಧೀಜಿಯನ್ನು ವಿರೋಧಿಸುವವರೊಂದಿಗೆ ಜೆಡಿಎಸ್ ಸಖ್ಯ ಬೆಳೆಸಿರುವುದು ಸರಿಯೇ, ಗೌಡರು ಪಕ್ಷದಲ್ಲಿನ ಇತರರ ಅಭಿಪ್ರಾಯಕ್ಕೆ ಮನ್ನಣೆ ಕೊಡದೆ ಬಿಜೆಪಿಯೊಂದಿಗೆ ಹೆಜ್ಜೆ ಹಾಕಿದ್ದಾರೆ, ಇದನ್ನು ಪ್ರಶ್ನಿಸುವ ಅಧಿಕಾರ ನಾನೂ ಸೇರಿದಂತೆ ಇತರರಿಗೂ ಇದೆ.
ಚುನಾವಣೆ ಗೆಲ್ಲುವ ಏಕೈಕ ಉದ್ದೇಶದಿಂದ ಗಾಂಧೀಜಿಯವರ ತತ್ವಗಳನ್ನು ಬಲಿ ಕೊಡುವುದು ಎಷ್ಟರ ಮಟ್ಟಿಗೆ ಸರಿ.
ಈಗ ನಮ್ಮ ನೇತೃತ್ವದ ಪಕ್ಷವೇ ನಿಜವಾದ ಪಕ್ಷ ಅವರು ಸಿದ್ಧಾಂತಗಳನ್ನು ಬಿಟ್ಟು ಹೋಗಿದ್ದಾರೆ, ಅವರಿಗೆ ಜಾತ್ಯತೀತ ಗುಣವೇ ಇಲ್ಲ, ಅದು ಇರುವುದು ನಮ್ಮಲ್ಲಿ ಮಾತ್ರ.
ಪಕ್ಷವನ್ನು ಬೇರೆಯವರಿಗೆ ಅಡ ಇಡುವುದಿಲ್ಲ
ಯಾರು ಏನೇ ಹೇಳಿದರೂ ನಾನು ಪಕ್ಷವನ್ನು ಬೇರೆಯವರಿಗೆ ಅಡ ಇಡುವುದಿಲ್ಲ ಮತ್ತು ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ ಎಂದು ನಾಣು ಸ್ಪಷ್ಟಪಡಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ’ಇಂಡಿಯಾ’ ಮೈತ್ರಿಕೂಟದೊಂದಿಗೆ ಚುನಾವಣಾ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದರು.
1 comment
ನೈಜ ಸುದ್ದಿಗಾಗಿ ಧನ್ಯವಾದಗಳು