36
ಇಲಾಖೆ ನಿರ್ಧಾರಕ್ಕೆ ಸಂಪುಟ ಒಪ್ಪಿಗೆ ದೊರೆತಿದೆ: ಚೆಲುವರಾಯಸ್ವಾಮಿ
ಬೆಳಗಾವಿ: ಕೃಷಿ ಭಾಗ್ಯ ಯೋಜನೆ ಶೀಘ್ರದಲ್ಲೇ ಅನುಷ್ಟಾನಗೊಳ್ಳಲಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಸಿ.ಎನ್. ಬಾಲಕೃಷ್ಣ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಯೋಜನೆಗೆ ಮರುಚಾಲನೆ ನೀಡಲಾಗಿದೆ, ಇಲಾಖೆ ನಿರ್ಧಾರಕ್ಕೆ ಸಂಪುಟದ ಒಪ್ಪಿಗೆಯೂ ದೊರೆತಿದೆ ಎಂದರು.
ಕೃಷಿ ಭಾಗ್ಯ ಯೋಜನೆ ಲಾಭ ಪಡೆಯಲು ರೈತರಿಗಾಗಿ ಮಾರ್ಗಸೂಚಿ ಹೊರಡಿಸಲಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ತಿಂಗಳಾಂತ್ಯದೊಳಗೆ ಬೆಳೆ ವಿಮೆ ಹಣ ಪಾವತಿ
ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಸಕ್ತ ತಿಂಗಳಾಂತ್ಯದೊಳಗೆ ಬೆಳೆ ವಿಮೆ ಹಣ ಪಾವತಿಯಾಗಲಿದೆ ಎಂದರು.
ಶರಣು ಸಲಗಾರ ಅವರ ಪ್ರತ್ಯೇಕ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಈ ವರ್ಷ ಬರ ಹಿಂದೆಂದಿಗಿಂತಲೂ ತೀವ್ರವಾಗಿದೆ, ಪ್ರಸಕ್ತ ಸಾಲಿನ ಬೆಳೆ ಕಟಾವು ಸಮೀಕ್ಷೆ ಪೂರ್ಣಗೊಂಡಿದ್ದು ಉಳಿದ ರೈತರಿಗೂ ವಿಮೆ ಹಣ ಶೀಘ್ರ ತಲುಪಲಿದೆ ಎಂದರು
.