ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕಾರ
ಬೆಳಗಾವಿ: ದೇಶದ ಪ್ರಜಾಪ್ರಭುತ್ವದ ಪವಿತ್ರ ಸ್ಥಳವಾದ ದೆಹಲಿಯ ಸಂಸತ್ತಿನಲ್ಲಿ ಆಗುಂತಕ ವ್ಯಕ್ತಿಗಳು ಸದನಕ್ಕೆ ಪ್ರವೇಶಿಸಿರುವುದು ಕಳವಳಕಾರಿಯಾಗಿದ್ದು, ಈ ಭದ್ರತಾ ವೈಫಲ್ಯವನ್ನು ಖಂಡಿಸಿ, ಕರ್ನಾಟಕ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕರಿಸಿತು.
ವಿಧಾನಸಭೆ ಕಲಾಪದ ಮಧ್ಯದಲ್ಲಿ ವಿಷಯ ಪ್ರಸ್ತಾಪಿಸಿದ ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ ಅವರು, ಸಂಸತ್ತಿನಲ್ಲಿ ಇಂದು ಅಪರಿಚಿತ, ಆಂಗುತಕರು ಪ್ರವೇಶಿಸಿ, ಭಯ ಹುಟ್ಟಿಸಿರುವುದು ತೀವ್ರ ಖಂಡನೀಯವಾದದ್ದು. ಈ ಘಟನೆಯನ್ನು ಸದನವು ಖಂಡಿಸಿ ನಿರ್ಣಯ ಕೈಗೊಳ್ಳಬೇಕೆಂದು ಹೇಳಿದರು.
ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಸಂಸತ್ ಸದನ ಪ್ರವೇಶಿಸಿ ಭಯ ಹುಟ್ಟಿಸಿದ ಘಟನೆ ಅತ್ಯಂತ ಖಂಡನೀಯವಾದದ್ದು. ಇದನ್ನು ರಾಜ್ಯದ ಜನತೆಯ ಪರವಾಗಿ ಖಂಡಿಸಬೇಕು. ರಾಜ್ಯ ವಿಧಾನಮಂಡಲದ ಕಲಾಪಗಳಿಗೂ ಸುರಕ್ಷತೆಯ ದೃಷ್ಟಿಯಿಂದ ಇದು ಪಾಠವಾಗಬೇಕು.
ವಿಧಾನಸಭೆಗೂ ಭದ್ರತೆ ಹೆಚ್ಚಳ; ಆಧಾರ್ ಕಾರ್ಡ್ ಪರಿಶೀಲನೆ
ಸದನ ಸದಸ್ಯರು ಪ್ರವೇಶ ಪತ್ರಗಳನ್ನು ನೀಡುವಾಗ ಎಚ್ಚರಿಕೆ ವಹಿಸಿ ಪೂರ್ವಾಪರ ವಿಚಾರಿಸಿ ಪರಿಚಯಸ್ಥರಿಗೆ ಮಾತ್ರ ನೀಡಬೇಕು. ತಪಾಸಣೆ ತೀವ್ರವಾಗಬೇಕು. ಭದ್ರತಾ ಲೋಪವಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು. ಈ ಕುರಿತು ತಮ್ಮ ಸಿಬ್ಬಂದಿಗಳಿಗೂ ಸೂಚನೆ ನೀಡಬೇಕೆಂದು ಸಭಾಧ್ಯಕ್ಷರನ್ನು ಕೋರಿದರು.
ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮಾತನಾಡಿ, ಘಟನೆಯನ್ನು ರಾಜ್ಯದ ಪರವಾಗಿ ಕಠಿಣವಾಗಿ ಖಂಡಿಸುತ್ತೇವೆ. ಇಂದು ಸದನಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆಗುಂತಕರಿಗೆ ಕಠಿಣ ಕ್ರಮವಾಗಬೇಕು. ಸದನಗಳ ಪ್ರವೇಶಕ್ಕೆ ಪಾಸ್ ನೀಡುವಾಗ ಅವರ ಆಧಾರ್ ಕಾರ್ಡ್ ಪರಿಶೀಲಿಸಿ, ಸರಿಯಾದ ಪರಿಚಯ ನೋಡಿ ನೀಡಬೇಕು ಎಂದು ಹೇಳಿದರು.
ಲೋಕಸಭೆಯಲ್ಲಿ ಮೈಸೂರು ಯುವಕನ ದಾಂಧಲೆ
ಘಟನೆಯನ್ನು ಖಂಡಿಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ, ವಿಪಕ್ಷ ನಾಯಕ ಆರ್. ಅಶೋಕ, ಶಾಸಕರಾದ ಸುರೇಶಕುಮಾರ್, ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಸದಸ್ಯರು ಮಾತನಾಡಿದರು.
2 comments
[…] ರಾಜ್ಯ […]
[…] ರಾಜ್ಯ […]