ಕಾಂಗ್ರೆಸ್ ಸಭೆಯಲ್ಲಿ ಸೋಮಶೇಖರ್, ಹೆಬ್ಬಾರ್, ವಿಶ್ವನಾಥ್
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು, ಉತ್ತರ ಕನ್ನಡ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಆಕಾಂಕ್ಷಿಗಳಾಗಿರುವ ಬಿಜೆಪಿಯ ಶಾಸಕರಾದ ಎಚ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್, ಎಚ್. ವಿಶ್ವನಾಥ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಾಗೂ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲೇ ಬಿಜೆಪಿಯಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ.
ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಬಹಿರಂಗವಾಗಿಯೇ ಬಿಜೆಪಿ ಮತ್ತು ಅದರ ನಾಯಕರನ್ನು ಟೀಕಿಸುತ್ತಾ, ಕಾಂಗ್ರೆಸ್ ನಾಯಕರನ್ನು ಹೊಗಳುತ್ತಾ ಆ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕರಿಂದಲೂ ಹಸಿರು ನಿಶಾನೆ
ಅಧಿಕಾರ ಕಳೆದುಕೊಂಡ ತಕ್ಷಣವೇ ಬಿಜೆಪಿಯ ನಾಯಕರನ್ನು ನಿಂದಿಸಿ ಆ ಪಕ್ಷದ ಕಾರ್ಯಕ್ರಮಗಳಿಗೂ ಹೋಗದೆ, ಕಾಂಗ್ರೆಸ್ ಮುಖಂಡರ ಜೊತೆ ಬೆರೆಯುತ್ತಿರುವ ಸೋಮಶೇಖರ್ ಹಾಗೂ ಹೆಬ್ಬಾರ್ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರಿಂದಲೂ ಹಸಿರು ನಿಶಾನೆ ದೊರೆತಂತಿದೆ.
ನಿನ್ನೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಕರೆದಿದ್ದ ಶಾಸಕಾಂಗ ಸಭೆಯಲ್ಲಿ ಕಾಣಿಸಿಕೊಂಡು ನಂತರ ಡಿ.ಕೆ. ಶಿವಕುಮಾರ್ ಕರೆದಿದ್ದ ಔತಣಕೂಟ ಹಾಗೂ ಸಾಧು ಕೋಕಿಲ ಅವರ ಮನರಂಜನಾ ಕಾರ್ಯಕ್ರಮದಲ್ಲಿ ಇತರ ಶಾಸಕರ ಜೊತೆ ಸ್ಟೆಪ್ ಹಾಕಿದ್ದಾರೆ.
ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು
ಮುಖ್ಯಮಂತ್ರಿ ಅವರಿಗೆ ತಮ್ಮ ತವರು ಜಿಲ್ಲೆಯ ಲೋಕಸಭಾ ಕ್ಷೇತ್ರವನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿದ್ದಾರೆ.
ಯಡಿಯುರಪ್ಪ ಮತ್ತು ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದ ಸೋಮಶೇಖರ್ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ವಹಿಸಲಾಗಿತ್ತು, ಆ ಸಂದರ್ಭದಲ್ಲಿ ಅವರು ಜಿಲ್ಲಾ ಜನರಿಗೆ ಚಿರಪರಿಚಿತರಾಗಿದ್ದರು, ಇದಕ್ಕೂ ಮಿಗಿಲಾಗಿ ಅವರು ಒಕ್ಕಲಿಗ ಸಮಯದಾಯಕ್ಕೆ ಸೇರಿದವರಾಗಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸೋಮಶೇಖರ್ ಅವರಿಗೆ ಜೆಡಿಎಸ್ ಮುಖಂಡರ ಬೆಂಬಲವೂ ದೊರೆಯಬಹುದು.
ಅಲ್ಪಸಂಖ್ಯಾತರು, ಪರಿಶಿಷ್ಟ ಹಾಗೂ ಹಿಂದುಳಿದ ಸಮಯದಾಯ ಸೇರಿದಂತೆ ಒಂದಿಷ್ಟು ಒಕ್ಕಲಿಗ ಮತಗಳನ್ನೂ ಪಡೆದರೆ ಈ ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲಬಹುದು ಎಂಬುದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಅಭಿಪ್ರಾಯವಾಗಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ
ಈ ಕಾರಣದಿಂದಲೇ ಸೋಮಶೇಖರ್ ಅವರನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಮುಂದಾಗಿದ್ದಾರೆ. ಇದರ ಮಧ್ಯೆ ವಿಶ್ವನಾಥ್ ಕೂಡ ಇದೇ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಲು ಆಸಕ್ತಿ ತೋರಿರುವ ಹೆಬ್ಬಾರ್ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ಸದಸ್ಯ ಆರ್.ವಿ. ದೇಶಪಾಂಡೆ ಪುತ್ರನಿಗೆ ಈ ಬಾರಿ ಬಿಜೆಪಿ ಟಿಕೆಟ್ ದೊರೆಯಲಿದೆ ಎಂಬ ಮಾತು ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ದೇಶಪಾಂಡೆ ಮಗನ ವಿರುದ್ಧ ಕಣಕ್ಕಿಳಿಯಲು ಹೆಬ್ಬಾರ್, ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ, ಇದಕ್ಕೆ ಕಾಂಗ್ರೆಸ್ ನಾಯಕರ ಬೆಂಬಲವೂ ಇದೆ ಎನ್ನಲಾಗಿದೆ.
ಬಿಜೆಪಿ ಶಾಸಕಾಂಗ ಸಭೆಯಿಂದ ದೂರ
ಸೋಮಶೇಖರ್ ಮತ್ತು ಹೆಬ್ಬಾರ್ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಿಂದ ದೂರ ಉಳಿದಿದ್ದರು.
ಆದರೆ ನಿನ್ನೆ ನಡೆದ ಕಾಂಗ್ರೆಸ್‌ನ ಸಭೆ ಮತ್ತು ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗವಹಿಸುವ ಮೂಲಕ ರಾಜಕೀಯ ಅಂಗಳದಲ್ಲಿ ನಡೆಯುತ್ತಿರುವ ಚರ್ಚೆಗೆ ಪುಷ್ಟಿ ಕೊಟ್ಟಿದ್ದಾರೆ.
ಬಿಜೆಪಿ ಸದಸ್ಯರು ಪಕ್ಷದ ಔತಣಕೂಟ ಮತ್ತು ಸಭೆಯಲ್ಲಿ ಭಾಗವಹಿಸಿದ್ದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಶಾಸಕರಾದ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ನಿನ್ನೆ ರಾತ್ರಿ ಪಕ್ಷದ ಸಭೆಗೆ ಬಂದಿಲ್ಲ. ನಾವು ಆಹ್ವಾನ ನೀಡಿದ್ದ ಭೋಜನಕೂಟಕ್ಕೆ ಬಂದಿದ್ದರು ಎಂದು ತಿಳಿಸಿದ್ದಾರೆ.
ವಿಶ್ವನಾಥ್ ಅವರು ಸೇರಿದಂತೆ ಅನ್ಯ ಪಕ್ಷದ 10 ಶಾಸಕರು ಉಪಹಾರ ಕೂಟಕ್ಕೆ ಬಂದಿದ್ದರು, ನಮ್ಮ ಶಾಸಕಾಂಗ ಸಭೆಗೆ ಏಕೆ ಬರುತ್ತಾರೆ. ಅವರು ನಮ್ಮ ಪಕ್ಷದ ಶಾಸಕರಲ್ಲ. ಹೀಗಾಗಿ ಅವರು ನಮ್ಮ ಶಾಸಕಾಂಗ ಸಭೆಗೆ ಬಂದಿಲ್ಲ ಎಂದರು.
3 comments
[…] ರಾಜ್ಯ […]
[…] ರಾಜ್ಯ […]
[…] ರಾಜ್ಯ […]