ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಶೇಕಡ 80 ಸಬ್ಸಿಡಿ
ಬೆಳಗಾವಿ: ಅನಧಿಕೃತ ಕೃಷಿ ಪಂಪ್ ಸೆಟ್ಗಳನ್ನು ಸಕ್ರಮಗೊಳಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ಶೇಕಡ 80ರಷ್ಟು ಸಬ್ಸಿಡಿ ನಿಡುವುದಾಗಿ ಘೋಷಣೆ ಮಾಡಿದೆ.
ವಿಧಾನಸಭೆಯ ಪ್ರಶ್ಮೋತ್ತ ವೇಳೆಯಲ್ಲಿ ಸದಸ್ಯರುಗಳ ಪ್ರಸ್ತಾವಕ್ಕೆ ಉತ್ತರಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, ರಾಜ್ಯದ ರೈತರ 4 ಲಕ್ಷ ಕೃಷಿ ಪಂಪ್ ಸೆಟ್ಗಳಿಗೆ ಸರ್ಕಾರದಿಂದ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಸಕ್ರಮಗೊಳಿಸಲಗುವುದು ಎಂದರು.
ಸಕ್ರಮಕ್ಕೆ ನೋಂದಯಿಸಿರುವವರಿಗೆ ಈ ಸೌಲಭ್ಯ
ವಿದ್ಯುತ್ ಕಂಬದಿಂದ 500 ಮೀಟರ್ ವ್ಯಾಪ್ತಿಯೊಳಗಡೆ ಇರುವ ಅಕ್ರಮ ಪಂಪ್ ಸೆಟ್ಗಳ ಸಕ್ರಮಕ್ಕೆ ನೋಂದಯಿಸಿರುವವರಿಗೆ ಈ ಸೌಲಭ್ಯ ದೊರೆಯಲಿದೆ.
500 ಮೀಟರ್ನಿಂದ ಆಚೆ ಇರುವ ಪಂಪ್ ಸೆಟ್ಗಳಿಗೆ ಕೇಂದ್ರ ಸರ್ಕಾರ ಶೇ.30 ಹಾಗೂ ರಾಜ್ಯ ಸರ್ಕಾರ ಶೇ.50 ರಷ್ಟು ಸಬ್ಸಿಡಿ ನೀಡಿ, ಸೋಲಾರ್ ಪಂಪ್ ಸೆಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.
2023 ರ ಸೆಪ್ಟೆಂಬರ್ 22 ರ ನಂತರ ನೊಂದಾಯಿಸಲ್ಪಡುವ ಐಪಿ ಸೆಟ್ಗಳಿಗೆ ಮೂಲಸೌಕರ್ಯಗಳನ್ನು ರೈತರು ತಾವೇ ಮಾಡಿಕೊಳ್ಳಬೇಕು ಎಂಬ ನಿಯಮವಿತ್ತು. ಇದನ್ನು ಮಾರ್ಪಡಿಸಿ ಸರ್ಕಾರವೇ ಮೂಲ ಸೌಕರ್ಯ ಒದಗಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಲಾಗಿದೆ ಎಂದರು.
ಕೃಷಿಗೆ 7 ಗಂಟೆ ವಿದ್ಯುತ್
ರಾಜ್ಯದಲ್ಲಿ ಕೃಷಿಗೆ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ ಅವರು, ಪ್ರಸಕ್ತ ವರ್ಷದಲ್ಲಿ ಮಳೆ ಕೊರತೆಯಿಂದಾಗಿ ಜಲಮೂಲದಿಂದ ಉತ್ಪತ್ತಿಯಾಗುತ್ತಿದ್ದ ವಿದ್ಯುತ್ ಪ್ರಮಾಣ ಕಡಿಮೆಯಾಗಿದೆ ಎಂದರು.
ಇದರೊಂದಿಗೆ ರಾಜ್ಯದ ವಿದ್ಯುತ್ ಬೇಡಿಕೆ 8,000 ಮೆಗಾ ವ್ಯಾಟ್ನಿಂದ 16,500 ಮೆಗಾ ವ್ಯಾಟ್ಗೆ ಏರಿಕೆಯಾಗಿ, ವಿದ್ಯುತ್ ಅಭಾವ ಉಂಟಾಗಿತ್ತು. ಹೊರ ರಾಜ್ಯಗಳಿಂದ ಒಪ್ಪಂದ ಮಾಡಿಕೊಂಡು ವಿದ್ಯುತ್ ಖರೀದಿಸಲಾಗಿದೆ.
ಇದರೊಂದಿಗೆ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿಯೂ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಸದ್ಯ ರಾಜ್ಯದಲ್ಲಿ ಯಾವುದೇ ವಿದ್ಯುತ್ ಕೊರತೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.
1 comment
[…] ರಾಜ್ಯ […]