ಬೆಳಗಾವಿಗೆ ಸತ್ಯ ಶೋಧನಾ ಸಮಿತಿ ಭೇಟಿ
ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ದಲಿತ ಮಹಿಳೆಯನ್ನು ಬೆತ್ತಲಾಗಿಸಿದ ಘಟನೆ ಖಂಡಿಸಿ ನಾಳೆ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ವಿಧಾನಸಭೆಯ ಅಧಿವೇಶನ ಮುಗಿದ ಬಳಿಕ ಇಂದು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪಕ್ಷದ ಮುಖಂಡರು, ಹಿರಿಯರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಿಸಿದರು.
ವಂಟಮೂರಿ ಘಟನೆ ದೇಶಾದ್ಯಂತ ಚರ್ಚೆ
ವಂಟಮೂರಿ ಘಟನೆ ದೇಶಾದ್ಯಂತ ಚರ್ಚೆಯಾಗುತ್ತಿದೆ, ಪರಿಶಿಷ್ಟ ಜಾತಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿದ್ದು ಖಂಡನಾರ್ಹ ಮತ್ತು ಖೇದಕರ.
ಘಟನೆ ಸಂತ್ರಸ್ತೆಯನ್ನು ಮುಖ್ಯಮಂತ್ರಿ ಇದುವರೆಗೆ ಭೇಟಿ ಮಾಡಿಲ್ಲ, ಆ ಸಂದರ್ಭದಲ್ಲಿ ಸಂತ್ರಸ್ತೆಯ ಸಹಾಯಕ್ಕೆ ಧಾವಿಸದ ಕುರಿತು ಹೈಕೋರ್ಟ್ ಸಹಾ ಚಾಟಿ ಬೀಸಿದೆ, ಆದರೂ, ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.
ಬೆಳಗಾವಿಗೆ ಸತ್ಯ ಶೋಧನಾ ಸಮಿತಿ ಭೇಟಿ
ಕೇಂದ್ರದಿಂದ ನಾಳೆ ಒಂದು ತಂಡ ಬೆಳಗಾವಿಗೆ ಭೇಟಿ ನೀಡಲಿದ್ದು, ಕೇಂದ್ರ ಸಚಿವೆ ಆಶಾ ಲಾಕ್ಡಾ, ಸಂಸದರಾದ ಅಪರಾಜಿತ್ ಸಾರಂಗಿ, ಸುನಿತಾ ದುಗ್ಗಲ್, ರಂಜಿತಾ ಕೋಹ್ಲಿ, ಲಾಕೆಟ್ ಚಟರ್ಜಿ ಅವರು ಸಂತ್ರಸ್ತೆಯನ್ನು ಭೇಟಿ ಮಾಡಲಿದ್ದಾರೆ ಎಂದರು.