ಉಪಮುಖ್ಯಮಂತ್ರಿ ಶಿವಕುಮಾರ್ ಆದೇಶ
ಬೆಳಗಾವಿ: ಮಂಡ್ಯ ಜಿಲ್ಲೆಯ ಕೆ.ಆರ್.ಎಸ್.ಜಲಾಶಯದಲ್ಲಿ ಹೂಳು ತುಂಬಿದೆಯೇ, ಮಾಡರ್ನ್ ಸ್ಟ್ಯಾಂಡರ್ಡ್‌ಗೆ ಅಣೆಕಟ್ಟು ಹೊಂದಿಕೆಯಾಗುವಂತಿದೆಯೇ ಎಂಬ ಕುರಿತು ಅಧ್ಯಯನ ನಡೆಸಲು ತಜ್ಞರ ತಂಡ ಕಳುಹಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ನೀರಾವರಿ ಖಾತೆ ಹೊಣೆ ಹೊಂದಿರುವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಶಾಸಕರಾದ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹಾಗೂ ದಿನೇಶ್ ಗೂಳಿಗೌಡ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಉಪಮುಖ್ಯಮಂತ್ರಿ, ತಜ್ಞರ ತಂಡ ಕಳುಹಿಸಿ, ಅಧ್ಯಯನ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಅವರಿಗೆ ಸೂಚಿಸಿದರು.
ಜಲಾಶಯದ ಗರಿಷ್ಠ ಸಾಮರ್ಥ್ಯದ 49.50 ಟಿಎಂಸಿ ಅಡಿ ನೀರು ಈಗಲೂ ಸಂಗ್ರಹವಾಗುತ್ತಿದೆಯೇ, ಸೀಪೇಜ್ ನಿರ್ವಹಣೆ, ಗೇಟ್ ಸುಸ್ಥಿತಿ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ.
ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾದ ಕೆಆರ್‌ಎಸ್ ಅಣೆಕಟ್ಟೆ ಶತಮಾನ ಪೂರೈಸುತ್ತಿದೆ. ಮಂಡ್ಯ ಜಿಲ್ಲೆಯ ವ್ಯವಸಾಯ, ಕುಡಿಯುವ ನೀರು, ಅಲ್ಲದೆ ಮೈಸೂರು, ಬೆಂಗಳೂರು ಮಹಾನಗರಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರಿನ ಪೂರೈಕೆಗೆ ಇದೇ ಅಣೆಕಟ್ಟೆಯನ್ನು ಅವಲಂಬಿಸಿದೆ.
ಅಣೆಕಟ್ಟೆಯ ಸುರಕ್ಷತೆ, ಕಾರ್ಯನಿರ್ವಹಣಾ ಸಾಮರ್ಥ್ಯದ ಬಗ್ಗೆ ಪರಿಶೀಲಿಸಿ, ಸೂಕ್ತ ಮುನ್ನೆಚ್ಚರಿಕಾ ಕ್ರಮ ವಹಿಸುವ ಅಗತ್ಯವಿದೆ ಎಂದು ಮನವಿ ಮಾಡಿದ್ದರು.