ನ್ಯಾಯಾಂಗದ ಕಣ್ಣಿಗೆ ಮಣ್ಣೆರೆಚುವ ಯತ್ನ: ಆರ್.ಅಶೋಕ್
ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಹಿಂಪಡೆದ ಕ್ರಮ ಕಾನೂನು ಬಾಹಿರ ಕ್ರಮ ಹಾಗೂ ನ್ಯಾಯಾಂಗದ ಕಣ್ಣಿಗೆ ಮಣ್ಣೆರೆಚುವ ಯತ್ನ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಿಧಾನಸಭೆಯಲ್ಲಿಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಈ ಕ್ರಮ ವಿರೋಧಿಸಿ ನಿಲುವಳಿ ಸೂಚನೆ ಮಂಡನೆಗೆ ಪ್ರಯತ್ನಿಸಿದರಾದರೂ, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಸಭಾಧ್ಯಕ್ಷ ಯು.ಟಿ.ಖಾದಿರ್ ಅವಕಾಶ ನೀಡಲಿಲ್ಲ.
ರಾಜಕೀಯ ದುರುದ್ದೇಶಗಳಿಂದ ಕೂಡಿದೆ
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಅಶೋಕ್, ರಾಜ್ಯ ಸಚಿವ ಸಂಪುಟ ಕೈಗೊಂಡ ನಿರ್ಧಾರ ಸಂವಿಧಾನ ಬಾಹಿರ ಕ್ರಮವಾಗಿದೆ, ರಾಜಕೀಯ ದುರುದ್ದೇಶಗಳಿಂದ ಕೂಡಿದೆ ಎಂದು ಆರೋಪಿಸಿದರು.
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಪ್ರಕರಣವನ್ನು 2019ರ ಸೆಪ್ಟೆಂಬರ್ 25 ರಂದು ಸಿಬಿಐ ತನಿಖೆಗೆ ಒಪ್ಪಿಸಿತ್ತು, ಒಮ್ಮೆ ತನಿಖೆಗೆ ನೀಡಿದ ನಂತರ ಮತ್ತೆ ಹಿಂಪಡೆಯಲು ಅವಕಾಶವಿಲ್ಲ ಎಂದು ವಾದಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಇಂತಹ ಕೆಲಸ ಮಾಡಲಿಲ್ಲ
ಕಾಂಗ್ರೆಸ್ ಸರರ್ಕಾರ ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ಅವರುಗಳ ವಿರುದ್ಧದ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿತ್ತು, ನಂತರ ಬಿಜೆಪಿ ಅಧಿಕಾರಕ್ಕೆ ಬಂದಾಗ ಆ ಪ್ರಕರಣಗಳನ್ನು ಹಿಂಪಡೆಯುವ ಕೆಲಸ ಮಾಡಲಿಲ್ಲ.
ಆದರೆ ಸರ್ಕಾರ ತನಗೆ ತೋಚಿದಂತೆ ನಿರ್ಣಯ ಕೈಗೊಳ್ಳುವ ಮೂಲಕ ನ್ಯಾಯಾಂಗದ ಕಣ್ಣಿಗೆ ಮಣ್ಣೆರುಚುವ ಕೆಲಸ ಮಾಡುತ್ತಿದೆ ಎಂದರು.