ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ
ಬೆಂಗಳೂರು: ಕಾನೂನಿನ ಅರಿವಿಲ್ಲದೆ ವನ್ಯಜೀವಿಗಳ ಅಂಗಾಂಗದಿಂದ ಸಿದ್ಧಪಡಿಸಿದ ವಸ್ತುಗಳನ್ನು ನೋಂದಣಿ ಮಾಡಿಸದೆ ಇಟ್ಟುಕೊಂಡಿರುವ ಮುಗ್ಧ ಜನತೆಗೆ ಕಿರುಕುಳ ಆಗದಂತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕಾನೂನು ರೂಪಿಸಲಾಗುವುದು ಎಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಇಂದಿಲ್ಲಿ ತಿಳಿಸಿದ್ದಾರೆ.
ಕಾನೂನು ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಅವರು, ವನ್ಯ ಜೀವಿಗಳ ಅಂಗಾಂಗದ ವಸ್ತುಗಳನ್ನು ಇಟ್ಟುಕೊಳ್ಳಲು ಕಾನೂನಿನಲ್ಲಿ ಅಕಾಶವಿಲ್ಲ, ಇಂತಹ ವಸ್ತುಗಳನ್ನು ಸರ್ಕಾರಕ್ಕೆ ಮರಳಿಸಲು ಸಾರ್ವಜನಿಕರಿಗೆ ಅವಕಾಶ ನೀಡುವ ಸಂಬಂಧ ಕಡತವನ್ನು ಪುನರ್ ಮಂಡಿಸಲು ಸೂಚನೆ ನೀಡಿದರು.
ಅರಣ್ಯವಾಸಿಗಳ ಹಕ್ಕು ರಕ್ಷಿಸುವ ಹಾಗೂ ಹುಲಿ ಉಗುರು ಸೇರಿದಂತೆ ವನ್ಯ ಜೀವಿಗಳ ಅಂಗಾಂಗದ ಫಲಕಗಳು, ಆಭರಣಗಳು ಸೇರಿದಂತೆ ವಿವಿಧ ವಸ್ತುಗಳನ್ನು ಸರ್ಕಾರಕ್ಕೆ ಮರಳಿಸಲು ಒಂದು ಬಾರಿಗೆ ಅವಕಾಶ ನೀಡುವ ಕಾನೂನಾತ್ಮಕ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆಸಲಾಯಿತು.