ಲೋಕಸಭೆ ಸೀಟು ಹಂಚಿಕೆಗೆ ಮಾತುಕತೆ
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಮಾಲೋಚನೆ ನಡೆಸಲು ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ವರಿಷ್ಠರು ದೆಹಲಿಗೆ ಆಹ್ವಾನ ನೀಡಿದ್ದಾರೆ.
ಬಿಜೆಪಿ ಆಹ್ವಾನದ ಹಿನ್ನೆಲೆಯಲ್ಲಿಕುಮಾರಸ್ವಾಮಿ ಅವರು ಬುಧವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ. ಲೋಕಸಭೆ ಚುನಾವಣೆ ಮೈತ್ರಿ ಹಾಗೂ ಸೀಟು ಹಂಚಿಕೆ ಕುರಿತಂತೆ ಸಮಾಲೋಚನೆ ನಡೆಸುವ ಉದ್ದೇಶದಿಂದ ಕುಮಾರಸ್ವಾಮಿ ಅವರು ಪ್ರವಾಸ ಮೊಟಕುಗೊಳಿಸಿ ಒಂದು ದಿನ ಮೊದಲೇ ಸಿಂಗಾಪುರದಿಂದ ಧಾವಿಸಿ ಬಂದಿದ್ದಾರೆ.
ಪ್ರವಾಸದಿಂದ ಹಿಂದಿರುಗಿದ ಕೂಡಲೇ ದೆಹಲಿಯಲ್ಲಿರುವ ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭೇಟಿ ಸಾಧ್ಯತೆ
ದೆಹಲಿಯ ಭೇಟಿ ಸಂದರ್ಭದಲ್ಲಿ ತಮ್ಮ ತಂದೆಯವರ ಜತೆಗೂಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಪ್ರಧಾನಿ ಭೇಟಿ ಸಂದರ್ಭದಲ್ಲಿ ಸಿದ್ದರಾಮಯ್ಯ ಆಡಳಿತದಲ್ಲಿ ನಡೆದಿದೆ ಎನ್ನಲಾದ ಹಗರಣಗಳು, ಭೂ ವ್ಯವಹಾರಕ್ಕೆ ಸಂಬಂಧಿಸಿದ ಆರೋಪಗಳ ದಾಖಲೆಗಳನ್ನು ನೀಡಲಿದ್ದಾರೆಂತೆ
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹಗರಣಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ತಂತ್ರಗಾರಿಕೆ ಇದೆ ಎನ್ನಲಾಗಿದೆ.
ಕೋವಿಡ್ ಹೆಚ್ಚಳ: ಸಾರ್ವಜನಿಕರೇ ಎಚ್ಚರ
ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮತ್ತು ಮತದಾರರ ನಾಡಿಮಿಡಿತದ ಬಗ್ಗೆ ಬಿಜೆಪಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ವರಿಷ್ಠರ ಕೈ ಸೇರಿವೆ.
ಚುನಾವಣಾ ಪೂರ್ವ ಸಮೀಕ್ಷೆ ಆಧಾರದ ಮೇಲೆ ಸೀಟು ಹೊಂದಾಣಿಕೆ ಆಗಲಿದೆ. ಇದಕ್ಕೆ ಕುಮಾರಸ್ವಾಮಿ ಅವರು ಸಹಮತ ವ್ಯಕ್ತಪಡಿಸಲಿದ್ದಾರೆ.
ಜೆಡಿಎಸ್ 4 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ
ಕರ್ನಾಟಕದಲ್ಲಿ ಮೈತ್ರಿಕೂಟ ಹೆಚ್ಚು ಸ್ಥಾನಗಳಿಸಬೇಕು ಎಂಬ ಉದ್ದೇಶ ಎರಡೂ ಪಕ್ಷದ ನಾಯಕರಲ್ಲಿದೆ. ಜೆಡಿಎಸ್ 4 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಲಿದ್ದು, ಉಳಿದ ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡಲಿದ್ದಾರೆ.
ನಾಲ್ಕು ಕ್ಷೇತ್ರಗಳ ಬಗ್ಗೆ ಈ ಭೇಟಿ ಸಂದರ್ಭದಲ್ಲೇ ಅಂತಿಮ ನಿರ್ಧಾರವಾಗಲಿದೆ. ಸೀಟು ಹಂಚಿಕೆಯ ಜೊತೆಗೆ ಸಮೀಕ್ಷೆಯನ್ನು ಮುಂದಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಪ್ರಾಥಮಿಕ ಹಂತದ ಚರ್ಚೆಯೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ನಡೆಯಲಿದೆ.
ಕುಮಾರಸ್ವಾಮಿ ಅವರ ಈ ಭೇಟಿ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಪಸ್ಥಿತರಿರುತ್ತಾರೆ ಎನ್ನಲಾಗಿದೆ.