ಸರ್ಕಾರಕ್ಕೆ ಮುಜುಗರ ತಂದ ಜಮೀರ್ ರೀಲ್ಸ್
ಬೆಂಗಳೂರು:ರಾಜ್ಯ ಬರದಿಂದ ತತ್ತರಿಸುತ್ತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಮಂತ್ರಿಮಂಡಲದ ಸದಸ್ಯರು ಐಷಾರಾಮಿ ಜೀವನ ನಡೆಸುತ್ತಾ ವಿಶೇಷ ವಿಮಾನದಲ್ಲಿ ತೇಲುತ್ತಿರುವುದು ಭಾರೀ ಟೀಕೆಗೆ ಗುರಿಯಾಗಿದೆ.
ಮಳೆಯಿಲ್ಲದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೆ, ಸಾಮಾನ್ಯರ ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ, ಇಂತಹ ಗಂಭೀರ ಸ್ಥಿತಿಯಲ್ಲೂ ಶ್ರೀಮಂತಿಕೆಯ ದರ್ಪ ತೋರುವ, ಮೋಜು-ಮಸ್ತಿಯೇ ತಮ್ಮ ಜೀವನದ ಶೈಲಿ ಎಂದು ಪ್ರದರ್ಶಿಸಿಕೊಳ್ಳುತ್ತಿರುವ ಜಮೀರ್ ಅಹಮದ್ ಖಾನ್ ಜೊತೆ ಮುಖ್ಯಮಂತ್ರಿ ಭಾಗಿಯಾಗಿರುವುದು ಈ ರಾಜ್ಯದ ದೌರ್ಭಾಗ್ಯವಲ್ಲವೇ ಎಂದು ಬಿಜೆಪಿ ಟೀಕಿಸಿದೆ.
ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಜಮೀರ್ ಅವರೇ ತೆಗೆದಿರುವ ರೀಲ್ಸ್ ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಬಿಡುಗಡೆ ಮಾಡಿ ಕೆಂಡ ಕಾರಿದ್ದಾರೆ.
ಸಿದ್ದರಾಮಯ್ಯ ಮಂತ್ರಿಮಂಡಲದ ಸದಸ್ಯರ ಆಡಂಬರ, ವೈಭವದ ಪ್ರದರ್ಶನಗಳನ್ನು ನೋಡಿದರೆ, ರೋಮ್ ದೊರೆ ನೀರೋ ಎಂದು ಉಲ್ಲೇಖಿಸುವ ಬದಲು ರಾಜ್ಯ ಬರದಿಂದ ತತ್ತರಿಸುತ್ತಿದ್ದರೆ, ದೊರೆ ಆಕಾಶದಲ್ಲಿ ಓಲಾಡುತ್ತಾ ತೇಲುತ್ತಿದ್ದಾರೆ ಎಂದು ವರ್ಣಿಸಿದ್ದಾರೆ.
ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯಿಂದ ರೈತರು ಕಂಗಾಲಾಗಿದ್ದು ಅವರ ನೆರವಿಗೆ ಬರುವಂತೆ ಪ್ರಧಾನಿ ಅವರಿಗೆ ಮುಖ್ಯಮಂತ್ರಿ ಅವರು, ದೆಹಲಿಯಲ್ಲಿ ಹಿಂದಿನ ದಿನವಷ್ಟೇ ಮನವಿ ಮಾಡಿಕೊಂಡಿದ್ದರು.
ಮೂರು ದಿನಗಳ ಕಾಲ ದೆಹಲಿಯಲ್ಲಿ ಉಳಿದಿದ್ದ ಮುಖ್ಯಮಂತ್ರಿ ಹಾಗೂ ಅವರ ಸಹೋದ್ಯೋಗಿಗಳು ಕೇಂದ್ರದ ವಿವಿಧ ಸಚಿವರುಗಳನ್ನು ಭೇಟಿ ಮಾಡಿ ಬರಕ್ಕೆ ನೆರವು ಕೋರಿದ್ದರು.
ಮುಖ್ಯಮಂತ್ರಿ ಅವರು ಪ್ರಧಾನಿ ಅವರನ್ನಷ್ಟೇ ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನೂ ಭೇಟಿ ಮಾಡಿ, ರಾಜ್ಯದ ಪರಿಸ್ಥಿತಿ ವಿವರಿಸಿ ವಿಪತ್ತು ನಿರ್ವಹಣಾ ಸಭೆ ಕರೆಯುವಂತೆ ಮನವಿ ಮಾಡಿದ್ದರು.
ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಎಐಸಿಸಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಅವರು ದೆಹಲಿಯಿಂದ ನಗರಕ್ಕೆ ಹಿಂತಿರುಗಲು ಇದೇ ಐಷಾರಾಮಿ ವಿಮಾನವನ್ನು ಕಾಯ್ದಿರಿಸಲಾಗಿತ್ತು.
ವಿಮಾನದ ಐಷಾರಾಮಿಯನ್ನು ನೋಡಿ ಜಮೀರ್ ಅವರೇ ಸ್ವತಃ ಈ ರೀಲ್ಸ್ ತೆಗೆಸಿಕೊಂಡು ತಮ್ಮ ಎಕ್ಸ್ (ಟ್ವೀಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
2 comments
[…] ರಾಜ್ಯ […]
[…] ರಾಜ್ಯ […]