ಅಮಿತ್ ಷಾ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಸಭೆ
ಮೈಸೂರು: ನಾಳೆ ನಡೆಯಲಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ರಾಜ್ಯದ ಬರ ಪರಿಹಾರ ಬಿಡುಗಡೆ ಕುರಿತು ನಿರ್ಧಾರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದ ಸಂದರ್ಭದಲ್ಲಿ ರಾಜ್ಯದ ಬರ ಪರಿಸ್ಥಿತಿ ಕುರಿತು ವಿವರಿಸಲಾಗಿದೆ ಎಂದರು.
ಕೇಂದ್ರ ನಾಯಕರ ಸಕಾರಾತ್ಮಕ ಸ್ಪಂದನೆ
ಬರಪರಿಹಾರ ಸೇರಿದಂತೆ ರಾಜ್ಯದ ಬೇಡಿಕೆಗಳಿಗೆ ಕೇಂದ್ರ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈಡೇರಿಸುವ ಭರವಸೆ ಇದೆ.
ಪ್ರಧಾನಮಂತ್ರಿ ಅವರ ಭೇಟಿ ಸಂದರ್ಭದಲ್ಲಿ ಬರ ಪರಿಸ್ಥಿತಿ ಜೊತೆಗೆ ಮಹಾದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ನರೇಗಾ ಯೋಜನೆಯಡಿ ಮಾನವ ದಿನಗಳನ್ನು 150 ದಿನಗಳಿಗೆ ವಿಸ್ತರಿಸುವ ಬಗ್ಗೆಯೂ ಶೀಘ್ರ ತೀರ್ಮಾನ ಕೈಗೊಳ್ಳಲು ಮನವಿ ಮಾಡಲಾಗಿದೆ.
ಪ್ರಧಾನಿ ಮೋದಿ ಅವರು ಕರ್ನಾಟಕ ಬರ ಪರಿಸ್ಥಿತಿ ಹಾಗೂ ಇತರ ಬೇಡಿಕೆಗಳ ಬಗ್ಗೆ ಸಮಾಧಾನಚಿತ್ತರಾಗಿ ಆಲಿಸಿ, ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಕೋವಿಡ್: ಜನರು ಆತಂಕ ಪಡಬೇಕಾಗಿಲ್ಲ
ಮೈಸೂರಿನಲ್ಲಿ 6 ಜನರಿಗೆ ಕೋವಿಡ್ ತಗುಲಿದ್ದು, ಅವರುಗಳು ಇತರೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾರೂ ಆತಂಕ ಪಡಬೇಕಿಲ್ಲ, ಆದರೆ, ಎಚ್ಚರಿಕೆಯಿಂದ ಇರಬೇಕು ಹಾಗೂ ತಾಂತ್ರಿಕ ಸಲಹಾ ಸಮಿತಿ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.