ಅಹಿತಕರ ಘಟನೆ ತಡೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಇಂದಿಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪೊಲೀಸ್, ಆರೋಗ್ಯ, ಅಬಕಾರಿ ಇಲಾಖೆ, ಬಿಬಿಎಂಪಿ, ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಶಾಪಿಂಗ್ ಮಾಲ್ಗಳು ಹಾಗೂ ಪ್ರಮುಖ ಹೋಟೆಲ್ಗಳಲ್ಲಿ ಹೊಸ ವರ್ಷ ಆಚರಿಸಲು ಹೆಚ್ಚಿನ ಜನರು ಸೇರುವ ಸಾಧ್ಯತೆ ಇದ್ದು, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು, ರಾಜ್ಯದ ಪ್ರಮುಖ ನಗರಗಳಲ್ಲಿಯೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾ ಇಡಿ
ಎನ್ಐಎ ಅಧಿಕಾರಿಗಳು ಕಳೆದ ಒಂದು ತಿಂಗಳಿನಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ದಾಳಿ ನಡೆಸಿ, ಶಂಕಿತರನ್ನು ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ, ಕ್ರಿಸ್ಮಸ್ ಹಬ್ಬ, ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಹೊರಗಡೆಯಿಂದ ಬರುವವರ ಚಲನವಲನಗಳ ಮೇಲೆ ನಿಗಾ ವಹಿಸಬೇಕು.
ಹೊಸ ವರ್ಷಾಚರಣೆಗೆ ಜನ ಸೇರುವ ಪ್ರಮುಖ ಸ್ಥಳಗಳನ್ನು ಪೊಲೀಸ್ ಅಧಿಕಾರಿಗಳು ಗುರುತಿಸಿ, ಪರಿಶೀಲಿಸಬೇಕು, ಎಸ್ಡಿಆರ್ಎಫ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಬೇಕು.
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಬಿಬಿಎಂಪಿ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು, ಪೊಲೀಸ್ ಹೆಲ್ಪ್ ಡೆಸ್ಕ್ ತೆರೆಯಬೇಕು, ನಗರದ ಎಲ್ಲ ವಿಭಾಗದ ಡಿಸಿಪಿಗಳು ಸ್ಥಳೀಯ ಆಸ್ಪತ್ರೆಗಳಿಗೆ ಭೇಟಿ ನೀಡಿ, ಡಿಸೆಂಬರ್ 31 ರ ತಡರಾತ್ರಿ ತುರ್ತು ಚಿಕಿತ್ಸೆಗೆ ಅಲರ್ಟ್ ಆಗಿರುವಂತೆ ತಿಳಿಸಬೇಕು.
ಮದ್ಯದ ಅಂಗಡಿಗಳಿಗೆ ಹೆಚ್ಚಿನ ಸಮಯಾವಕಾಶ ನೀಡಬಾರದು
ವಿಶೇಷ ವಿದ್ಯುತ್ ದೀಪಾಲಂಕಾರ ಹಿನ್ನೆಲೆಯಲ್ಲಿ ಅವಘಡಗಳ ಸಾಧ್ಯತೆ ತಡೆಯುವಲ್ಲಿ ಅಗ್ನಿಶಾಮಕ ದಳ ಜಾಗೃತರಾಗಿರಬೇಕು. ಮದ್ಯದ ಅಂಗಡಿಗಳಿಗೆ ವಹಿವಾಟಿಗೆ ಹೆಚ್ಚಿನ ಸಮಯಾವಕಾಶ ನೀಡಬಾರದು ಎಂದರು.
ಮೆಟ್ರೋ ರೈಲು ಹಾಗೂ ಬಿಎಂಟಿಸಿ ಬಸ್ಗಳು ಹೆಚ್ಚಿನ ಅವಧಿಯವರೆಗೆ ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು, ಖಾಸಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.
1 comment
[…] ರಾಜ್ಯ […]