ಅನ್ಯ ಪಕ್ಷಗಳ ಮುಖಂಡರಿಗೆ ಮುಂದುವರೆದ ಕಾಂಗ್ರೆಸ್ ಗಾಳ
ಬೆಂಗಳೂರು: ನೂರಾಮೂವತ್ತಾರು ಶಾಸಕರು ಸೇರಿದಂತೆ ಮಾಜಿ ಸಚಿವರು, ಶಾಸಕರು, ಮುಖಂಡರಿಂದ ಕಾಂಗ್ರೆಸ್ ತುಂಬಿ ತುಳುಕುತ್ತಿದ್ದರೂ ರಾಜ್ಯ ನಾಯಕರಿಗೆ ಆಪರೇಷನ್ ಹಸ್ತದ ದಾಹ ಇಂಗಿಲ್ಲ.
ಪಕ್ಷದ ಪ್ರಭಾವೀ ಸಚಿವರು ಮಧ್ಯೆವರ್ತಿಗಳನ್ನು ಬಿಟ್ಟು ಅನ್ಯ ಪಕ್ಷಗಳ ಮುಖಂಡರುಗಳಿಗೆ ಹಸ್ತದ ಗಾಳ ಹಾಕುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲೇ ಅಧಿಕಾರದಿಂದ ವಂಚಿತರಾದ, ವಿಧಾನಸಭೆ ಮತ್ತು ಪರಿಷತ್ತಿನ ಶಾಸಕ- ಮುಖಂಡರ ದಂಡೇ ಇದ್ದರೂ, ಅನ್ಯ ಪಕ್ಷಗಳಿಂದ ಸೆಳೆಯುತ್ತಿರುವ ನಾಯಕರಿಗೆ ಅಧಿಕಾರ ಮತ್ತು ಇತರೆ ಆಮಿಷಗಳನ್ನು ನೀಡುವ ಭರವಸೆ ಕೊಡುತ್ತಿದ್ದಾರೆ.
ಅನ್ಯ ಪಕ್ಷದ ಮುಖಂಡರಿಗೆ ಲೋಕಸಭೆ ಟಿಕೆಟ್ ಭರವಸೆ
ಆರ್‌ಎಸ್‌ಎಸ್, ಎಬಿವಿಪಿಯಲ್ಲಿ ಹಲವು ಸಮಯದಿಂದ ದುಡಿದು ಬಿಜೆಪಿಯಲ್ಲಿ ಅಧಿಕಾರದ ಹುದ್ದೆ ಹೊಂದಿದ್ದ ಮಾಜಿ ಸಚಿವರಾದ ಸಿ.ಟಿ.ರವಿ ಹಾಗೂ ಅರವಿಂದ ಲಿಂಬಾವಳಿ ಅವರನ್ನೂ ಈ ಪ್ರಭಾವೀ ನಾಯಕ ಬಿಟ್ಟಿಲ್ಲ.
ಲಿಂಬಾವಳಿ ಅವರನ್ನು ಕೋಲಾರದಿಂದಲೂ, ರವಿ ಅವರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಮಂದಿನ ಚುನಾವಣೆಯಲ್ಲಿ ಕಣಕ್ಕಿಳಿಸುವ ಮತ್ತು ಚುನಾವಣಾ ವೆಚ್ಚ ಭರಿಸುವ ಆಮಿಷಗಳನ್ನೂ ಒಡ್ಡಿದ್ದಾರಂತೆ.
ರಾಜ್ಯ ಬಿಜೆಪಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಅಭ್ಯರ್ಥಿಗಳ ಕೊರತೆ ಇದೆ. ಇಂತಹುದೇ ಪರಿಸ್ಥಿತಿ ಕಾಂಗ್ರೆಸ್‌ನಲ್ಲೂ ಇದೆ.
ಅಭ್ಯರ್ಥಿಗಳ ಆಯ್ಕೆ ಜೊತೆಗೆ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಮತ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಇರಾದೆಯೂ ಕಾಂಗ್ರೆಸ್‌ಗೆ ಇದೆ.
20 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಕಾಂಗ್ರೆಸ್ ಗೆ
ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಎಂಬ ಕಾರಣಕ್ಕಾಗಿ ಅನ್ಯ ಪಕ್ಷಗಳ ಮುಖಂಡರನ್ನು ಸೆಳೆಯುವ ತಂತ್ರಕ್ಕೆ ಮತ್ತೆ ಚಾಲನೆ ಕೊಟ್ಟಿದ್ದಾರೆ.
ದೆಹಲಿಯ ನಾಯಕರೊಂದಿಗೆ ಚರ್ಚಿಸಿ ಹಿಂತಿರುಗುತ್ತಿದ್ದಂತೆ ಅನ್ಯ ಪಕ್ಷಗಳ ನಿಷ್ಠಾವಂತ ಮುಖಂಡರು, ಕಾರ್ಯಕರ್ತರು, ಶಾಸಕರು ಮತ್ತು ಸಂಸದರನ್ನು ಸೆಳೆಯಲು ಪ್ರಭಾವೀ ನಾಯಕರು ರಾತ್ರಿ ಕಸರತ್ತು ನಡೆಸಿದ್ದಾರೆ.
ಕೆಲವು ನಾಯಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್ ಸೇರಿದಂತೆ ಕೆಲವು ನಾಯಕರು ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ.
ಪ್ರತಿಷ್ಠೆಯಾದ ಲೋಕಸಭಾ ಚುನಾವಣೆ
ಕೆಪಿಸಿಸಿ ಅಧ್ಯಕ್ಷರಿಗೆ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಲೋಕಸಭಾ ಚುನಾವಣೆ ಪ್ರತಿಷ್ಠೆಯಾಗಿದೆ. ವಿಧಾನಸಭಾ ಚುನಾವಣಾ ಜಯಭೇರಿಯನ್ನೇ ಲೋಕಸಭಾ ಚುನಾವಣೆಯಲ್ಲೂ ಸಾಧಿಸಲು ತಂತ್ರ ರೂಪಿಸಿದ್ದಾರೆ.
ದೆಹಲಿಯಲ್ಲಿ ವರಿಷ್ಠರೊಂದಿಗೆ ನಡೆದ ಸಭೆಯಲ್ಲಿ ಆಪರೇಷನ್ ಹಸ್ತಕ್ಕೆ ಹಸಿರು ನಿಶಾನೆ ಪಡೆದಿರುವುದಲ್ಲದೆ, ಇದರಿಂದಾಗಿ ನಿಗಮ-ಮಂಡಳಿ ನೇಮಕಾತಿ ಹಾಗೂ ಕೆಪಿಸಿಸಿ ಪದಾಧಿಕಾರಿಗಳ ಪುನರ್ ರಚನೆಯೂ ಮುಂದಕ್ಕೆ ಹೋಗಿದೆ.
ಮತ್ತೆ ಮುಂದೂಡಿಕೆಯಾದ ನಿಗಮ-ಮಂಡಳಿ ನೇಮಕ
ಪಕ್ಷದ 39 ಶಾಸಕರಿಗೆ ಅಧಿಕಾರ ನೀಡುವ ಪಟ್ಟಿ ಅಂತಿಮಗೊಂಡು ಇನ್ನೇನು ಪ್ರಕಟಗೊಳ್ಳಬೇಕೆಂಬ ಸಮಯದಲ್ಲಿ ವರಿಷ್ಠರು ತಡೆ ನೀಡಿದ್ದಾರೆ.
ಕರ್ನಾಟಕದಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲೇಬೇಕೆಂಬ ಗುರಿ ಇಟ್ಟುಕೊಂಡಿರುವ ಎಐಸಿಸಿ, ರಾಜ್ಯ ನಾಯಕರಿಗೆ ಟಾರ್ಗೆಟ್ ನೀಡಿ ಮುಂದುವರಿಯುವಂತೆ ತಿಳಿಸಿದೆ.
ಚಳಿಗಾಲದಲ್ಲಿ ಕಾಡುವ ಚರ್ಮದ ತುರಿಕೆ!
2 comments
[…] ರಾಜ್ಯ […]
[…] ರಾಜ್ಯ […]