ಅವಹೇಳನಕಾರಿ ಹೇಳಿಕೆ ನೀಡಿದ ಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು: ಬೆಳೆ ನಷ್ಟದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಬಗ್ಗೆ ಸಚಿವರೊಬ್ಬರು ಬೇಜಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ಕೃಷಿಕರ ಅವಮಾನ ಮಾಡುತ್ತಿದ್ದಾರೆ ಎಂದು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಖಂಡನೀಯ, ಅನ್ನ ಕೊಡುವ ರೈತರನ್ನು ಅವಮಾನ ಮಾಡಿದ ಇಂತಹ ಸಚಿವರಿಗೆ ಮುಖ್ಯಮಂತ್ರಿ ಬುದ್ಧಿವಾದ ಹೇಳಬೇಕು, ತಿದ್ದಿಕೊಳ್ಳದ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ರೈತರಿಗೆ ಬರಗಾಲದ ಸಮರ್ಪಕ ಪರಿಹಾರ ನೀಡದ ಸರ್ಕಾರ, ರೈತರಿಗೆ ಪದೇಪದೇ ಅಪಮಾನ ಮಾಡುತ್ತಿದೆ ಎಂದರು.
ರೈತರ ಶಾಪ ತಟ್ಟಲಿದೆ
ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮಂತ್ರಿಯೊಬ್ಬರು ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದು, ಬರಗಾಲ ಬಂದಿದೆ, ಪರಿಹಾರಕ್ಕಾಗಿ ರೈತರು ಕಾಯುತ್ತಾರೆ ಎಂದಿರುವುದು ಸರಿಯಲ್ಲ, ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಪ್ರತಿಕ್ರಿಯಿಸಿ, ಬರಗಾಲಕ್ಕೆ ಸಂಬಂಧಪಟ್ಟಂತೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಬದಲಿಗೆ ರೈತರ ಅಪಮಾನ ಮಾಡುವಂತಹ ಕೆಲಸ ಮಾಡುತ್ತಲೇ ಇದೆ, ಬರಗಾಲ ಘೋಷಣೆಯಾದ ನಂತರ ರೈತರ ಖಾತೆಗೆ ಒಂದು ರೂಪಾಯಿ ಹಣವನ್ನೂ ಹಾಕಿಲ್ಲ, ಒಬ್ಬ ಜವಾಬ್ದಾರಿಯುತ ಸಚಿವರು ಬರಗಾಲ ಬರುವುದೇ ರೈತರು ಪರಿಹಾರ ಕೇಳುವುದಕ್ಕೆ ಎಂದಿರುವುದನ್ನು ಖಂಡಿಸುವುದಾಗಿ ತಿಳಿಸಿದರು.