ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿಲ್ಲಿ ಕರೆ ನೀಡಿದ್ದಾರೆ.
ನೂತನ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಮುನ್ನಡೆಯಬೇಕು, ಕರ್ನಾಟಕ ಕೇವಲ ದಕ್ಷಿಣ ಭಾರತದ ಬಿಜೆಪಿಯ ಭದ್ರಕೋಟೆಯಲ್ಲ, ಅದೊಂದು ಸುಭದ್ರ ಕೋಟೆ ಎಂಬ ಸಂದೇಶವನ್ನು ನೀಡಬೇಕಿದೆ ಎಂದರು.
ಪ್ರತಿಯೊಂದು ಚುನಾವಣೆಯಲ್ಲೂ ಅನೇಕ ಸವಾಲುಗಳಿರುತ್ತವೆ, ಎದುರಾಳಿಗಳನ್ನು ಹಗುರವಾಗಿ ಪರಿಗಣಿಸದೆ, ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಸಾಧನೆ ಮಾಡಬೇಕು.
ಗುರಿ ಮುಟ್ಟುವತನಕ ಶ್ರಮಿಸಬೇಕು
ಮುಂದಿನ ಲೋಕಸಭಾ ಚುನಾವಣೆವರೆಗೆ ಭಾನುವಾರ, ಹಬ್ಬ, ಹರಿದಿನ ಎಂದು ನೋಡದೆ, ಗುರಿ ಮುಟ್ಟುವತನಕ ವಿಶ್ರಾಂತಿ ಪಡೆಯದೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಅತ್ಯಂತ ಪ್ರಮುಖ ಕಾಲಘಟ್ಟದಲ್ಲಿ ನಮಗೆಲ್ಲರಿಗೂ ರಾಜ್ಯ ಪದಾಧಿಕಾರಿಗಳಾಗಿ ಕೆಲಸ ಮಾಡುವ ಜವಾಬ್ದಾರಿ ಲಭಿಸಿದೆ. ನಾವೆಲ್ಲರೂ ಹೊಣೆಯರಿತು ಕರ್ತವ್ಯ ನಿರ್ವಹಿಸಬೇಕು.
ಕೇಂದ್ರದ ಯೋಜನೆಗಳು ಮನೆ ಬಾಗಿಲಿಗೆ
ಕೇಂದ್ರದ ಎನ್‌ಡಿಎ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ಮನೆ ಬಾಗಿಲಿಗೆ ಹೇಗೆ ತಲುಪುತ್ತಿವೆ ಎಂಬುದನ್ನು ತಿಳಿಸುವ ಕೆಲಸ ಮಾಡಬೇಕು.
ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ದೇಶದ ಪ್ರಧಾನಿ ಮಾಡುವ ಮೂಲಕ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರದಿಡುವಂಥ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
1 comment
[…] ರಾಜ್ಯ […]