25 ವರ್ಷಗಳ ನಂತರ ರಾಷ್ಟ್ರದ ಉನ್ನತ ಸ್ಥಾನ
ಬೆಂಗಳೂರು: ಇಪ್ಪತ್ತೈದು ವರ್ಷಗಳ ನಂತರ ಕನ್ನಡಿಗರೊಬ್ಬರಿಗೆ ರಾಷ್ಟ್ರದ ಉನ್ನತ ಸ್ಥಾನ ದೊರೆಯುವ ಕಾಲ ಸಮೀಪವಾಗಿದೆ.
ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮುತ್ಸದ್ಧಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿ ಸ್ಥಾನ ಹುಡುಕಿಕೊಂಡು ಬರುವಂತಿದೆ. ಎನ್‌ಡಿಎ ಒಕ್ಕೂಟಕ್ಕೆ ಪ್ರತಿಯಾಗಿ ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿ ಎಂದು ಖರ್ಗೆ ಅವರನ್ನು ಬಿಂಬಿಸಲಾಗಿದೆ.
ಒಕ್ಕೂಟದಲ್ಲಿ ಯಾರ ವಿರೋಧವೂ ಇಲ್ಲ
ಕರ್ನಾಟಕ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಆಗಿರುವ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ತೃಣಮೂಲ ಕಾಂಗ್ರೆಸ್‌ನ ಅಧಿನಾಯಕಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖರ್ಗೆ ಅವರ ಹೆಸರನ್ನು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಸೂಚಿಸಿದ್ದಾರೆ. ಒಕ್ಕೂಟದಲ್ಲಿ ಇದಕ್ಕೆ ಯಾರ ವಿರೋಧವೂ ವ್ಯಕ್ತವಾಗಿಲ್ಲ.
ಅಲ್ಪಸಂಖ್ಯಾತರ ಮತ್ತು ಪರಿಶಿಷ್ಟರ ಮತಗಳನ್ನು ಒಗ್ಗೂಡಿಸಿ ಹೋರಾಟಕ್ಕೆ ಇಳಿಯಲು ಇಂಡಿಯಾ ಮುಂದಾಗಿದೆ. ಖರ್ಗೆ ಅವರು ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಕರ್ನಾಟಕ ಸೇರಿದಂತೆ ರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಚೈತನ್ಯ ದೊರೆತಂತಾಗಿದೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಮತ್ತೆ ಕಾಂಗ್ರೆಸ್ ಕಡೆಗೆ ವಾಲುವಂತಾಗಿದೆ.
ಇದಲ್ಲದೆ, ಐದು ದಶಕಗಳಿಗೂ ಮಿಗಿಲಾಗಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸೇವೆ ಸಲ್ಲಿಸಿ, ಮುತ್ಸದ್ಧಿ ರಾಜಕಾರಣಿಗಳ ಸಾಲಿಗೆ ಸೇರಿರುವ ಖರ್ಗೆ ಅವರ ವರ್ಚಸ್ಸನ್ನು ಇಂಡಿಯಾ ಮುಂದಿನ ಲೋಕಸಭೆ ಚುನಾವಣೆಗೆ ಬಳಸಿಕೊಳ್ಳಲು ಮುಂದಾಗಿದೆ.
ಖರ್ಗೆ ಅಧಿಕಾರಕ್ಕೆ ಹಾತೊರೆದವರಲ್ಲ
ಸದ್ಯಕ್ಕೆ ಎನ್‌ಡಿಎಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡುವ ಲೆಕ್ಕಾಚಾರ ಹಾಕಿರುವ ಇಂಡಿಯಾ ಒಕ್ಕೂಟದಲ್ಲಿರುವ ಪಕ್ಷಗಳು, ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿವೆ.
ಖರ್ಗೆ ಇದರಲ್ಲಿ ಮಹತ್ತರ ಪಾತ್ರ ವಹಿಸಿರುವುದಲ್ಲದೆ, ತನಗೆ ಅಧಿಕಾರ ಬೇಕೆಂದು ಎಂದೂ ಹಾತೊರೆದವರಲ್ಲ. ಇದು ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಮೂಡಲು ಹಾಗೂ ಅವರ ನಾಯಕತ್ವವನ್ನು ಬಿಂಬಿಸಲು ಕಾರಣವಾಗಿದೆ.
ಕರ್ನಾಟಕದಲ್ಲಿ ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಕಾರ್ಯನಿರ್ವಹಿಸಿದ ಖರ್ಗೆ, 9 ಬಾರಿ ಸತತ ವಿಧಾನಸಭೆಗೆ ಪ್ರವೇಶ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಅವರಿಗೆ ಎರಡು ಬಾರಿ ಮುಖ್ಯಮಂತ್ರಿ ಹುದ್ದೆ ಕೈತಪ್ಪಿತು. ಆದರೂ ಅವರೆಂದೂ ಆ ಬಗ್ಗೆ ಪ್ರತಿರೋಧ ವ್ಯಕ್ತಪಡಿಸದೆ, ಪಕ್ಷದ ಶಿಸ್ತಿನ ಸಿಪಾಯಿಯಂತೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಪಕ್ಷದ ಬಗ್ಗೆ ಅವರಿಗಿರುವ ನಿಷ್ಠೆ, ಕಾಳಜಿಯನ್ನು ಮನಗಂಡಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರು ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ದರು. ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರೈಲ್ವೆ ಖಾತೆ ಜವಾಬ್ದಾರಿ ವಹಿಸಿಕೊಂಡು ಮಾಡಿದ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.
ನಂತರ ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನಮಾನ ಇಲ್ಲದಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜಕೀಯವಾಗಿ ಎದುರಿಸಿದ್ದು, ಕಾಂಗ್ರೆಸ್‌ನಲ್ಲಿ ದೊಡ್ಡ ಹುದ್ದೆ ಗಳಿಸಲು ಸಾಧ್ಯವಾಯಿತು. ಇದೀಗ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ, ಎಐಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಮತ್ತೊಬ್ಬ ಕನ್ನಡಿಗರಿಗೆ ಅವಕಾಶ
2024 ರ ಏಪ್ರಿಲ್-ಮೇನಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆತರೆ ಖರ್ಗೆಗೆ ಪ್ರಧಾನಿ ಸ್ಥಾನ ದೊರೆಯುವ ಅವಕಾಶ ಸಿಗಲಿದೆ. ಒಂದು ವೇಳೆ ನಿರೀಕ್ಷೆಯಂತೆ ಅವರು ಪ್ರಧಾನಿಯಾದರೆ, ಮತ್ತೊಬ್ಬ ಕನ್ನಡಿಗ ರಾಷ್ಟ್ರದ ಉನ್ನತ ಹುದ್ದೆಗೆ ಏರಿದ ದಾಖಲೆ ನಿರ್ಮಾಣವಾಗಲಿದೆ.
2 comments
[…] ರಾಜ್ಯ […]
[…] ರಾಜ್ಯ […]