ಅದುರಿ ಹೋದ ಕಾಂಗ್ರೆಸ್ ನಾಯಕರು
ಬೆಂಗಳೂರು: ಸದ್ದಿಲ್ಲದೆ ನಡೆಯುತ್ತಿರುವ ಆಪರೇಷನ್ ಕಮಲದ ಕಾರ್ಯಾಚರಣೆಗೆ ಕಾಂಗ್ರೆಸ್ ನಾಯಕರು ಅದುರಿ ಹೋಗಿದ್ದಾರೆ.
ಸಂಪುಟದಲ್ಲಿ ಅವಕಾಶ ದೊರೆಯದ, ಕೆಲವು ಉದ್ದಿಮೆಗಳನ್ನು ನಡೆಸುತ್ತಿರುವ ಪ್ರಭಾವೀ ಶಾಸಕರನ್ನು ಗುರುತಿಸಿ, ಬಿಜೆಪಿ ಮುಖಂಡರು ತೆರೆಮರೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಆಪರೇಷನ್ ಕಮಲದ ಕಾರ್ಯಾಚರಣೆಗೆ ಈ ಬಾರಿ ಯಾವುದೇ ರಾಜ್ಯ ನಾಯಕರನ್ನು ಬಳಸಿಕೊಂಡಿಲ್ಲ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಸ್ತುವಾರಿಯಲ್ಲಿ ನಡೆಯುತ್ತಿದೆ.
ಕರಾವಳಿ ನಾಯಕರ ಮೂಲಕ ಆಪರೇಷನ್
ಕರಾವಳಿ ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಮುಂದಿಟ್ಟುಕೊಂಡು, ಸದ್ದಿಲ್ಲದೆ ಆಪರೇಷನ್ ಕಮಲಕ್ಕೆ ಬುನಾದಿ ಹಾಕುತ್ತಿದ್ದಾರೆ.
ಕಾಂಗ್ರೆಸ್‌ನಿಂದ ಬಿಜೆಪಿಗೆ ಸೆಳೆಯಲ್ಪಡುವವರ ದೊಡ್ಡ ಪಟ್ಟಿಯೇ ಸಿದ್ಧಗೊಂಡಿದೆ, ಇದರ ಮಾಹಿತಿ ತಿಳಿಯುತ್ತಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮವರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಅಖಾಡಕ್ಕೆ
ತಮ್ಮ ಶಾಸಕರನ್ನು ಬಿಜೆಪಿ ಸೆಳೆಯುತ್ತಿರುವುದನ್ನು ಪತ್ತೆ ಹಚ್ಚಿ, ಅವರ ಮನವೊಲಿಸಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅಖಾಡಕ್ಕೆ ಇಳಿದಿದ್ದಾರೆ.
ಬಿಜೆಪಿ ಪಟ್ಟಿಯಲ್ಲಿರುವ ಕೆಲವು ಶಾಸಕರನ್ನು ಮನೆಗೆ ಕರೆಸಿಕೊಂಡು ಮಾತನಾಡಿದರೆ, ಮತ್ತೆ ಕೆಲವು ಶಾಸಕರ ಮನೆಗೆ ತೆರಳಿ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಅಸಮಾಧಾನಿತ ಶಾಸಕರು ಪಕ್ಷದ ಚಟುವಟಿಕೆಗಳಿಂದ ಅಲ್ಲದೆ, ಶಾಸಕಾಂಗ ಪಕ್ಷದ ಸಭೆಗಳಿಂದಲೂ ದೂರ ಉಳಿದಿದ್ದಾರೆ.
ಅಪ್ಪ-ಮಗ ಅಸಮಾಧಾನ
ಲೇಔಟ್ ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ ಕೂಡಾ ಅಸಮಾಧಾನಿತರಲ್ಲಿ ಪ್ರಮುಖರು, ಚುನಾವಣಾ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದ್ದನ್ನು ಚಾಚೂ ತಪ್ಪದೆ ಮಾಡಿದರೂ ತಮಗೆ ಅಧಿಕಾರ ನೀಡಲಿಲ್ಲ ಎಂಬ ಅಸಮಾಧಾನ ಅಪ್ಪ-ಮಗನಲ್ಲಿದೆ.
ನೀಡಿದ ಭರವಸೆಗಳನ್ನೂ ಈಡೇರಿಸಿಲ್ಲ, ಅದು ಹೋಗಲಿ ಎಂದರೆ ಕ್ಷೇತ್ರಕ್ಕೆ ಅನುದಾನವನ್ನೂ ನೀಡುತ್ತಿಲ್ಲ ಎಂಬ ಬೇಸರದಲ್ಲಿದ್ದಾರೆ, ಇದು ಇವರದ್ದಷ್ಟೇ ಅಲ್ಲದೆ, ಬಂಡಾಯದ ಗುಂಪಿನಲ್ಲಿರುವ ಬಹುತೇಕ ಶಾಸಕರದ್ದಾಗಿದೆ.
ಶಿವಕುಮಾರ್ ಹಾಗೂ ಕೃಷ್ಣಪ್ಪ ರಾಜಕೀಯವಾಗಿ ಸಮಾನಾಂತರ ದೂರ ಕಾಯ್ದುಕೊಂಡವರು, ಇಷ್ಟಾದರೂ ಕಳೆದ ಎರಡು ದಿನಗಳ ಹಿಂದೆ, ಕೃಷ್ಣಪ್ಪ ಅವರ ಮನೆಗೆ ಶಿವಕುಮಾರ್ ತೆರಳಿ ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಸಿದ್ದಲ್ಲದೆ, ಮನವೊಲಿಸುವ ಕಾರ್ಯವನ್ನೂ ಮಾಡಿದ್ದಾರೆ.
ತಮಗಿರುವ ಎಲ್ಲ ಬೇಸರವನ್ನು ಕೃಷ್ಣಪ್ಪ ಎಳೆ ಎಳೆಯಾಗಿ ಬಿಡಿಸಿಟ್ಟು, ಸಿದ್ದರಾಮಯ್ಯ ಅವರು ಹೇಳಿದ ಎಲ್ಲವನ್ನೂ ಮಾಡಿದರೂ ನಮಗೆ ಇಂತಹ ಸ್ಥಿತಿ ಬಂದಿದೆ, ನಮಗೂ ರಾಜಕೀಯ ಮಾಡಲು ಬರುತ್ತದೆ, ಅದನ್ನು ಮಾಡಿ ತೋರಿಸುತ್ತೇವೆ ಎಂದಿದ್ದಾರೆ.
ಮಾತುಕತೆ ಮುಗಿದ ನಂತರ ಕೊನೆಯಲ್ಲಿ ಶಿವಕುಮಾರ್, ನನ್ನ ಬೆಂಬಲಕ್ಕೆ ನಿಲ್ಲಿರಪ್ಪಾ ಎಂದು ಅಪ್ಪ-ಮಗನನ್ನು ಕೋರಿದಾಗಲೂ, ಕೃಷ್ಣಪ್ಪ ಯಾವುದೇ ಪ್ರತಿಕ್ರಿಯೆಯನ್ನೇ ನೀಡಲಿಲ್ಲ.
ಹಲವು ಶಾಸಕರ ಜೊತೆಯೂ ಚರ್ಚೆ
ಶಿವಕುಮಾರ್ ಇವರನ್ನಷ್ಟೇ ಅಲ್ಲದೆ, ಇನ್ನೂ ಹಲವಷ್ಟು ಶಾಸಕರನ್ನು ಸಂಪರ್ಕಿಸಿ ಚರ್ಚೆ ಮಾಡಿದ್ದಾರೆ, ಅವರನ್ನು ಸಮಾಧಾನಪಡಿಸುವ, ಓಲೈಸುವ ಕೆಲಸವನ್ನೂ ಪಕ್ಷದ ಅಧ್ಯಕ್ಷರಾಗಿ ಮಾಡುತ್ತಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನವೇ ಚೌಕಾಸಿ ನಾಯಕರೊಬ್ಬರು ಪಕ್ಷವನ್ನು ಒಡೆದು ಬಿಜೆಪಿ ಬೆಂಬಲಿಸುತ್ತಾರೆಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ಈ ಘಟನಾವಳಿಗಳು ನಡೆಯುತ್ತಿವೆ.
2 comments
[…] ರಾಜ್ಯ […]
[…] ರಾಜ್ಯ […]