ಅನುಷ್ಟಾನಕ್ಕೆ ಫೆಬ್ರುವರಿ 28 ಗಡುವು
ಬೆಂಗಳೂರು:ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಆಡಳಿತ ಭಾಷೆ, ಇದರಲ್ಲಿ ಯಾವುದೇ ರಾಜಿ ಇಲ್ಲ, ಸುಗ್ರೀವಾಜ್ಞೆ ಮೂಲಕ ಕನ್ನಡ ನಾಮಫಲಕ ಕಡ್ಡಾಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಾಮಫಲಕಗಳಿಗೆ ಕನ್ನಡ ಕಡ್ಡಾಯ ಕುರಿತ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಗ್ರೀವಾಜ್ಞೆ ಹೊರಡಿಸಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್ 17 (6)ಕ್ಕೆ ತಿದ್ದುಪಡಿ ತಂದು 2024ರ ಫೆಬ್ರುವರಿ 28ರೊಳಗೆ ವಾಣಿಜ್ಯ ಮಳಿಗೆಗಳು ಅನುಷ್ಠಾನಗೊಳಿಸಲು ಗಡುವು ನೀಡಲಾಗುವುದು ಎಂದರು.
ಶಾಂತಿಯುತ ಪ್ರತಿಭಟನೆಗೆ ವಿರೋಧ ಇಲ್ಲ
ಶಾಂತಿಯುತವಾದ ಪ್ರತಿಭಟನೆ ಮಾಡಲು ಸರ್ಕಾರದ ವಿರೋಧ ಇಲ್ಲ. ನಮಗೆ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇದೆ. ಕಾನೂನಿಗೆ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ ಸರ್ಕಾರ ಸಹಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳ ಬಯಸುತ್ತೇನೆ ಎಂದರು.
ಪ್ರತಿಭಟನೆಗಳನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾತ್ರ ನಡೆಸಬೇಕು, ರಾಜ್ಯ ಸರ್ಕಾರವು ಇದನ್ನು ಖಾತರಿಪಡಿಸಬೇಕು ಎಂದು ಕರ್ನಾಟಕ ಹೈಕೋರ್ಟ್ 2022ರಲ್ಲಿ ಸ್ಪಷ್ಟವಾದ ಆದೇಶ ಹೊರಡಿಸಿದೆ.
ರಾಜ್ಯದ ಹಿತದೃಷ್ಟಿಯಿಂದ ಶಾಂತಿಯುತ ಪ್ರತಿಭಟನೆ ಮಾಡಿದರೆ ವಿರೋಧಿಸುವುದಿಲ್ಲ, ಕಾನೂನು ಕೈಗೆ ತೆಗೆದುಕೊಂಡರೆ ಸರ್ಕಾರ ಕ್ರಮ ಕೈಗೊಳ್ಳಲಿದೆ, ಸಂಘಟನೆಯಿರಲಿ, ವ್ಯಕ್ತಿಗಳಿರಲಿ, ಖಾಸಗಿ ಸಂಸ್ಥೆಗಳಿರಲಿ ಯಾರೇ ಆಗಲಿ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು, ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬೇಡಿ, ಕಾಯ್ದೆ ಜಾರಿ ಮಾಡುತ್ತೇವೆ, ಅಲ್ಲಿವರೆಗೆ ಎಲ್ಲರೂ ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡುವುದಾಗಿ ತಿಳಿಸಿದರು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್ 17 (6) ರ ಪ್ರಕಾರ ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರದ ಅನುಮೋದನೆಯೊಂದಿಗೆ ನಡೆಸುತ್ತಿರುವ ವಾಣಿಜ್ಯ ಕೈಗಾರಿಕೆ, ವ್ಯಾಪಾರ ಸಂಸ್ಥೆ, ನ್ಯಾಸಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್ ಮುಂತಾದವುಗಳ ಹೆಸರನ್ನು ಪ್ರದರ್ಶಿಸುವ ಫಲಕಗಳ ಮೇಲಿನ ಅರ್ಧ ಭಾಗವು ಕನ್ನಡದಲ್ಲಿ ಇರತಕ್ಕದ್ದು ಎಂದು ತಿಳಿಸಲಾಗಿದೆ.
ಇದಕ್ಕೂ ಮೊದಲು 2018ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ನಾಮಫಲಕದಲ್ಲಿ ಶೇ.60 ಕನ್ನಡ ಭಾಷೆ ಹಾಗೂ ಶೇ.40ರಷ್ಟು ಇತರ ಭಾಷೆಯಲ್ಲಿರಬಹುದು ಎಂದು ತಿಳಿಸಲಾಗಿದೆ. ಇದರಂತೆಯೇ ಸುಗ್ರೀವಾಜ್ಞೆ ಹೊರಡಿಸಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್ 17 (6)ಕ್ಕೆ ತಿದ್ದುಪಡಿ ತಂದು 2022ರ ಫೆಬ್ರುವರಿ 28ರೊಳಗೆ ವಾಣಿಜ್ಯ ಮಳಿಗೆಗಳು ಅನುಷ್ಠಾನಗೊಳಿಸಲು ಗಡುವು ನೀಡಲಾಗುವುದು ಎಂದರು.
ಈ ಕಾಯ್ದೆಯ ನಿಯಮ 17 (8) ರಲ್ಲಿ ರಾಜ್ಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲ ಫಲಕಗಳಲ್ಲಿ ವಿಷಯಗಳ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿರತಕ್ಕದ್ದು.
ನಿಯಮ ರೂಪಿಸಲು ಕೂಡಲೇ ಕ್ರಮ
ಜಾಹೀರಾತುಗಳ ವರ್ಗೀಕರಣ ಮತ್ತು ಕನ್ನಡದಲ್ಲಿ ಪ್ರದರ್ಶಿಸಬೇಕಾದ ಜಾಹೀರಾತು ವಿಷಯಗಳ ಶೇಕಡಾವಾರು ಪ್ರಮಾಣವು ರಾಜ್ಯ ಸರ್ಕಾರದಿಂದ ನಿಯಮಿಸಲಾದಂತೆ ಇರತಕ್ಕದ್ದು ಎಂದು ತಿಳಿಸಲಾಗಿದೆ ಇದನ್ನು ಸಹ ಅನುಷ್ಠಾನಗೊಳಿಸಲಾಗುವುದು.
ಈ ಕಾಯ್ದೆಯ ಅಧಿಸೂಚನೆ ಹೊರಡಿಸಲು ಹಾಗೂ ನಿಯಮಗಳನ್ನು ರೂಪಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು.
1 comment
[…] ರಾಜ್ಯ […]