ಲೇಖನ:ಡಾ ಸುಬ್ರಹ್ಮಣ್ಯ ಸಿ. ಕುಂದೂರು
ಕನ್ನಡ ಸಾಹಿತ್ಯ ಪರಂಪರೆಯನ್ನು ವಿವೇಚನೆಗೆ ಒಡ್ಡುವಾಗ ಕುವೆಂಪು ಅವರ ವಿಚಾರಧಾರೆಗಳು ಮಹತ್ವವಾಗಿ ಕಾಣಿಸುತ್ತವೆ ಮತ್ತು ಕುವೆಂಪು ಅವರ ಸಾಹಿತ್ಯ ಪ್ರಜ್ಞೆಯು ಕಾಲದ ಹಂಗಿಗೆ ಒಳ ಪಡದೆ ಪ್ರತಿಯೊಬ್ಬರನ್ನು ಅಪ್ಪಿಕೊಳ್ಳುವ ಮತ್ತು ಸಾಹಿತ್ಯದ ಸಾಂಸ್ಕೃತಿಕ ತಿಳುವಳಿಕೆಯನ್ನು ನೀಡುವ ಮೀಮಾಂಸೆಯಂತಿದೆ.
ವಸಾಹತುಶಾಹಿಯ ಕಾಲಮಾನದಲ್ಲಿ ಕನ್ನಡ ಸಾಹಿತ್ಯಕ್ಕೆ, ಸರ್ವೋದಯದಂತಹ ದರ್ಶನಿಕ ತತ್ವವನ್ನು ನೀಡುವ ಮೂಲಕ ದೇಶಿಯ ಅಭಿವ್ಯಕ್ತಿಯನ್ನು ವಿಚಾರ ಕ್ರಾಂತಿ ಮತ್ತು ವಿಶ್ವಮಾನವ ತತ್ವದ ನೆಲೆಯಿಂದ ಮಂಡಿಸಿದ ಕವಿ ಕುವೆಂಪು.
ದಟ್ಟವಾದ ಮಲೆನಾಡಿನ ಮಡಿಲಿನಲ್ಲಿ ಬೆಳೆದ ಕುವೆಂಪು ಅವರಿಗೆ ನೆಲದ ಕಟುವಾದ ಘಮಲು ಕಲಾಭಿವ್ಯಕ್ತಿಯ ಸತ್ವವಾಗಿ ಸೃಜಿಸಿದ್ದನ್ನು ಕಾಣಬಹುದು. ವಸಾಹತುಶಾಹಿ ಆಳ್ವಿಕೆಯ ನೆಲೆಯಿಂದ ದಕ್ಕಿದ ಪಾಶ್ಚಾತ್ಯ ಚಿಂತನೆಗಳು ಹಾಗೂ ಸಾಹಿತ್ಯ ಮಾದರಿಯನ್ನು ಕನ್ನಡಕ್ಕೆ ನಮ್ಮದಾಗಿ ಒಗ್ಗಿಸಿಕೊಂಡು ಸಾಂಸ್ಕೃತಿಕವಾದ ಗುಣಾತ್ಮಕತೆಯನ್ನು ರೂಪಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ.
ಆಧುನಿಕವಾಗಿ ನಾವು ತಾಂತ್ರಿಕತೆಯನ್ನು ಅಪ್ಪಿಕೊಂಡು ಮಾತು ಹಾಗೂ ಸೃಜನಾತ್ಮಕತೆಯನ್ನು ಕಳೆದುಕೊಂಡು ಬಡವಾಗುತ್ತಿರುವಾಗ ಕುವೆಂಪು ಅವರ ಸಾಹಿತ್ಯದ ತಾತ್ವಿಕತೆಯಾಗಿರಬಹುದು, ಲೋಕದ ಘಟನೆಗಳನ್ನು ಕಾವ್ಯ, ಕಥನವಾಗಿ ದುಡಿಸಿಕೊಂಡ ಬಗೆಯೆಲ್ಲವು ನಮ್ಮ ಬದುಕಿನ ದಾರಿಗೆ ಚಿಕಿತ್ಸಕತೆಯನ್ನು ನೀಡಬಲ್ಲದು.
ದುಡಿಯುವ ಸಮುದಾಯಗಳು ದಾಸ್ಯದಿಂದ ಬಿಡುಗಡೆಯಾಗಬೇಕು
ಇಪ್ಪನೇ ಶತಮಾನದಲ್ಲಿ ಕನ್ನಡ ನೆಲದಲ್ಲಿ ಉಂಟಾದ ಪಲ್ಲಟವನ್ನು ಸಾಂಸ್ಕೃತಿಕ ಪ್ರಜ್ಞೆಯಾಗಿ ವಿವೇಚಿಸುವ ಕುವೆಂಪು ಸಾಹಿತ್ಯದ ರೂಪಗಳು ಇಂದಿಗೂ ಮಹತ್ವವೆಸುತ್ತವೆ. ನಮ್ಮ ಜನ, ಜನರ ಭಾಷೆ, ನೆಲ, ಜಲದ ಅಭಿವ್ಯಕ್ತಿಯನ್ನು ಜನ ಮುಖಿಯಾಗಿಸುವ ವಿವೇಚನೆಯನ್ನು ವಸಾಹತುಶಾಹಿಯ ಪ್ರತಿಯಾಗಿ ಕಟ್ಟುವ ಕಾರ್ಯವನ್ನು ಮಾಡುತ್ತಾರೆ.
ಮುಖ್ಯವಾಗಿ ದುಡಿಯುವ ಸಮುದಾಯಗಳು ದಾಸ್ಯದಿಂದ ಬಿಡುಗಡೆಯಾಗಿ ಸ್ವಂತಿಕೆಯನ್ನು ಕಾಣಬೇಕು ಯಾರ ಹಂಗಿಗೂ ಒಳಗಾಗಬಾರದು ಅನ್ನುವುದು ಕುವೆಂಪು ಅವರ ದೃಷ್ಟಿಯಾಗಿತ್ತು. ಕೃಷಿ ಮತ್ತು ಅದರ ಶ್ರಮ ಮೀಮಾಂಸೆಯನ್ನು ಬಿಗುವಾಗಿ ಲೋಕದ ಮುಂದಿಡುವುದನ್ನು ನೇಗಿಲ ಯೋಗಿ ಎಂಬ ಪದ್ಯವು ಧ್ವನಿಸುತ್ತದೆ.
ಭಾರತೀಯ ಸಾಹಿತ್ಯ ಪರಂಪರೆಯನ್ನು ನಮ್ಮ ನೆಲದ ಭಾಗವಾಗಿಯೇ ಕಟ್ಟುವ ಪೂರ್ಣದೃಷ್ಟಿಯನ್ನು ಹೊಂದಿದ್ದ ಕುವೆಂಪು ಅವರ ಲೋಕದೃಷ್ಟಿಯು ಜೀವನ ಮೌಲ್ಯವನ್ನು ಧ್ಯಾನಿಸಿದ್ದಂತಿದೆ.
ಮದುಮಗಳು, ಹೆಗ್ಗಡತಿ, ಮಲೆನಾಡ ಚಿತ್ರಗಳಂತಹ ಕಥನಗಳು ಬಹುಮುಖ್ಯವಾಗಿ ಆಧುನಿಕತೆ ಮತ್ತು ದೇಶೀಯತೆಯನ್ನು ಮುಖಾಮುಖಿಯಾಗಿಸಿ ಮಾನವ ಜೀವನದ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಮಲ್ಲಿಗೆಯ ಹೂವು ಪೋಣಿಸಿದಂತೆ ಪೋಣಿಸಿದ್ದು, ಇಂದಿನ ಅನೇಕ ಬರಹಗಾರರಿಗೆ ಮಾದರಿಯನ್ನು ಸ್ಪೂರ್ತಿಯನ್ನು ನೀಡಿದೆ.
ಕುವೆಂಪು ಬರೆದ ಶಿಶುಗೀತೆ, ನಾಟಕ, ವಿಮರ್ಶೆ, ಪ್ರಬಂಧ, ಕಥನ, ಕಾವ್ಯಗಳೆಲ್ಲವೂ ಕನ್ನಡ ಪರಂಪರೆಗೆ ಬಹುದೊಡ್ಡ ಕೊಡುಗೆಯನ್ನು ಒದಗಿಸಿತ್ತಲ್ಲದೆ ಕನ್ನಡ ಭಾಷೆಗೆ ಚಲನಶೀಲತೆಯನ್ನು ತಂದು ಕೊಟ್ಟಿದನ್ನು ಮರೆಯುವಂತಿಲ್ಲ.
ಹೆಚ್ಚಿನ ಸುದ್ದಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಕನ್ನಡ ನಾಮಫಲಕ ಅಳವಡಿಕೆಗೆ ಸುಗ್ರೀವಾಜ್ಞೆ
ಕಾನೂನು ಕೈಗೆತ್ತಿಕೊಂಡರೆ ಸಹಿಸುವುದಿಲ್ಲ
1 comment
ಕನ್ನಡ ಕುಲ ತಿಲಕ
ಒಂದು ಉತ್ತಮವಾದ ಲೇಖನ ಅಭಿನಂದನೆಗಳು