ಕೇಂದ್ರದಿಂದ ಬೆಂಬಲ ಬೆಲೆ ಘೋಷಣೆ ಸ್ವಾಗತಾರ್ಹ
ಬೆಂಗಳೂರು: ಕೇಂದ್ರ ಸರಕಾರ ಕೊಬ್ಬರಿಗೆ ಬೆಂಬಲ ಬೆಲೆ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದ್ದು, ರಾಜ್ಯದಲ್ಲಿ ನಾಫೆಡ್ ಮೂಲಕ 1.5 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಬೇಕು ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ತಮ್ಮ ’ಎಕ್ಸ್’ ಜಾಲತಾಣದಲ್ಲಿ ವಿಷಯ ತಿಳಿಸಿರುವ ಅವರು, ಕೊಬ್ಬರಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರಿಗೆ ರಾಜ್ಯದ ಸಮಸ್ತ ರೈತರ ಪರವಾಗಿ ಕೃತಜ್ಞತೆಗಳು, ಮಿಲ್ಲಿಂಗ್ ಕೊಬ್ಬರಿಗೆ ಪ್ರತಿ ಕ್ವಿಂಟಾಲ್ಗೆ 300 ರೂ. ಹಾಗೂ ಉಂಡೆ ಕೊಬ್ಬರಿಗೆ 250 ರೂ. ಏರಿಕೆ ಮಾಡಿರುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ ಎಂದಿದ್ದಾರೆ.
ಮನವಿಗೆ ಪ್ರಧಾನಿ ಸಕಾರಾತ್ಮಕ ಸ್ಪಂದನೆ
ಈ ತಿಂಗಳ 21ರಂದು ದೆಹಲಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತೆಂಗು ಬೆಳೆಗಾರರಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಪ್ರಧಾನಿ ಅವರು ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ನಾಫೆಡ್ ಮೂಲಕ ರಾಜ್ಯದಲ್ಲಿ ಕನಿಷ್ಠ 1.5 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಬೇಕು ಎಂದು ಮನವಿ ಮಾಡಿದರು.