ಹಲವು ವರ್ಷಗಳ ಭಕ್ತ ಸಮೂಹದ ಕನಸು ನನಸ್ಸಾಗುತ್ತಿದೆ
ಬೆಂಗಳೂರು: ಹಿಂದುತ್ವದ ಒಗ್ಗಟ್ಟಿನ ಬಿರುಗಾಳಿ ಬೀಸಿ ರಾಷ್ಟ್ರದಲ್ಲಿ ಬದಲಾವಣೆಯ ರಾಜಕೀಯ ತಂದಂತಹ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭಗೊಂಡಿದೆ. ಕೋಟ್ಯಾಂತರ ಜನರ ಹಲವು ವರ್ಷಗಳಿಂದ ಕಾಣುತ್ತಿದ್ದ ಕನಸು ನನಸಾಗುವ ಸಮೀಪಿಸುತ್ತದೆ.
ಜನವರಿ 22ರಂದು ಪುಣ್ಯ ಭೂಮಿ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ದಿವ್ಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ನೇರವೇರಲಿದೆ.
ರಾಷ್ಟ್ರದ ಮಠ ಮಾನ್ಯಗಳು ಹಾಗೂ ಹಿಂದು ಸಂಘಟನೆಗಳ ಅವಿರತ ಹೋರಾಟದ ಪ್ರತಿಫಲವಾಗಿ ವಿಶ್ವವಿಖ್ಯಾತ ರಾಮಮಂದಿರ ಶ್ರೀರಾಮ ಜನ್ಮ ಭೂಮಿಯಲ್ಲೇ ತಲೆ ಎತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಚಾಣಾಕ್ಯತನ ಹಿಂದು ಸಂಘಟನೆಗಳ ಒಗ್ಗಟ್ಟಿನ ಪರಿಶ್ರಮ ಫಲ ನೀಡಿದೆ. ಮುತ್ಸದ್ಧಿ ರಾಜಕಾರಣಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ನಡೆಸಿದ ಹೋರಾಟಕ್ಕೆ ಮೋದಿ ಅವರ ಎರಡನೇ ಆಡಳಿತಾವಧಿಯಲ್ಲಿ ಫಲ ದೊರೆತಿದೆ.
ಸಂಘ-ಸಂಸ್ಥೆಗಳು ಹಾಗೂ ರಾಷ್ಟ್ರದ ಪ್ರಜೆಗಳ ದೇಣಿಗೆಯಿಂದಲೇ ಭವ್ಯ ಮಂದಿರ ನಿರ್ಮಾಣ ಸಾಕಾರಗೊಂಡಿದೆ. ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಬೆಂಬಲದಿಂದ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ನಿಗದಿತ ಸಮಯದಲ್ಲಿ ಸಾಧನೆ ಮಾಡಿ ಹಿಂದುಗಳ ಪೂಜ್ಯ ಮಂದಿರ ನಿರ್ಮಾಣ ಮಾಡಲಾಗಿದೆ.
ಹತ್ತು-ಹಲವು ಅಡ್ಡಿ, ಆತಂಕ ನಡುವೆಯೂ ಕಾನೂನು ಹೋರಾಟದಲ್ಲಿ ಜಯಗಳಿಸಿ ವಿಶ್ವ ವಿಖ್ಯಾತ ಭವ್ಯ, ಸುಂದರ, ಪವಿತ್ರ ಮಂದಿರ ನಿರ್ಮಿಸಲಾಗಿದೆ.
ರಾಷ್ಟ್ರದ ವಿವಿಧ ಮೂಲೆಗಳಿಂದ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕೆ ರೈಲು ಸೇವೆ ಕಲ್ಪಿಸಲಾಗಿದೆ. ಪ್ರಮುಖ ಪವಿತ್ರ ಯಾತ್ರಾ ಸ್ಥಳ ಮಾತ್ರವಲ್ಲ ಪ್ರಮುಖ ಪ್ರವಾಸಿ ತಾಣವಾಗಿ ಅಯೋಧ್ಯೆಯ ರಾಮಮಂದಿರ ಮಾರ್ಪಟ್ಟಿದೆ.
ಮಂದಿರವಷ್ಟೇ ಅಲ್ಲ; ದೇವಾಸ್ಥಾನಕ್ಕೆ ಸಂಬಂಧಿಸಿದ ಸಂಕೀರ್ಣಗಳಿವೆ. ಹಿಂದೂಗಳ ನಂಬಿಕೆಯಂತೆ ರಾಮಮಂದಿರ ನಿರ್ಮಿಸಲಾಗಿದೆ. ಅಂತಿಮ ಹಂತದ ಕಾರ್ಯಗಳು ಭರದಿಂದ ಸಾಗಿವೆ.
ಒಮ್ಮೆಗೆ ಸಾವಿರಾರು ಭಕ್ತಾದಿಗಳು ಏಕಕಾಲದಲ್ಲಿ ದೇವರ ದರ್ಶನ ಪಡೆಯಬಹುದು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 8-10 ಇದ್ದರೂ ಈ ಮಂದಿರಕ್ಕೆ ಏನೂ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. ಉತ್ತರ ಭಾರತದ ಪ್ರಸಿದ್ಧ ನಾಗರ ಶೈಲಿಯಲ್ಲಿ ಮಂದಿರ ನಿರ್ಮಾಣಗೊಂಡಿದೆ. ಅಯೋಧ್ಯೆ ರೈಲ್ವೆ ನಿಲ್ದಾಣಕ್ಕೂ ಶ್ರೀರಾಮ ಮಂದಿರದಂತೆಯೇ ವಿನ್ಯಾಸಗೊಳಿಸಿರುವುದು ವಿಶೇಷವಾಗಿದೆ.
ರಾಮಾಯಣ ಮಹಾಕಾವ್ಯದ ಶ್ರೀರಾಮನ ಜನ್ಮಸ್ಥಳವೆಂದು ನಂಬಲಿರುವ ಅಯೋಧ್ಯೆಯ ಈ ಪವಿತ್ರ ಸ್ಥಳವು ಶತಮಾನಗಳಿಂದಲೂ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ.
ದೇಶದ ವಿವಿಧ ಮೂಲೆಗಳಿಂದ ಪವಿತ್ರವಾದ ಮಣ್ಣು ಮತ್ತು ನೀರನ್ನು ಸಂಗ್ರಹಿಸಿ ತಂದು ಮಂದಿರಕ್ಕೆ ಬಳಸಲಾಗಿದೆ. ಶ್ರೀರಾಮ ಮಂದಿರದ ಉದ್ಘಾಟನೆಯ ಸಮಾರಂಭವನ್ನೇ ಭಕ್ತರು ಎದುರು ನೋಡುತ್ತಿದ್ದಾರೆ. ಟ್ರಸ್ಟ್ ವತಿಯಿಂದ ಶ್ರೀರಾಮನ ದಿವ್ಯ ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಈಗಾಗಲೇ ದೇಶಾದ್ಯಂತ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಇಡೀ ವಿಶ್ವದ ಗಮನ ಸೆಳೆದಿರುವ ಈ ಪವಿತ್ರ ಮಂದಿರ ಉದ್ಘಾಟನೆ ಹಾಗೂ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡುವುದನ್ನು ಕಣ್ತುಂಬಿಕೊಳ್ಳಲು ಭಕ್ತ ಸಮೂಹ ತದೇಕ ಚಿತ್ತದಿಂದ ಕಾಯುತ್ತಿದೆ.