ಶಾಸಕರು-ಕಾರ್ಯಕರ್ತರಿಗೆ ಸಮಾನ ಸಂಖ್ಯೆಯಲ್ಲಿ ಅಧ್ಯಕ್ಷಗಿರಿ
ಬೆಂಗಳೂರು: ಸಂಕ್ರಾಂತಿ ವೇಳೆಗೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಆಗುವ ನಿರೀಕ್ಷೆ ಇದ್ದು, ಶಾಸಕರು ಹಾಗೂ ಕಾರ್ಯಕರ್ತರಿಗೂ ಸಮಾನ ಸಂಖ್ಯೆಯಲ್ಲಿ ಅಧ್ಯಕ್ಷಗಿರಿ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನದ ವ್ಯವಸ್ಥೆ ಮಾಡಲಾಗುವುದು, ಈ ಕುರಿತು ಎಲ್ಲಾ ನಾಯಕರು ಒಂದೆಡೆ ಕುಳಿತು ಚರ್ಚೆ ಮಾಡುತ್ತೇವೆ, ನೇಮಕಾತಿ ಪಟ್ಟಿ ಒಂದು ಹಂತಕ್ಕೆ ಬಂದಿದೆ, ಪಕ್ಷದ ಕೇಂದ್ರ ನಾಯಕರು ಸಹಾ ಕೆಲವರಿಗೆ ಅಧಿಕಾರ ನೀಡುವ ವಾಗ್ದಾನ ಮಾಡಿದ್ದಾರೆ, ಸಂಕ್ರಾಂತಿ ವೇಳೆಗೆ ನೇಮಕ ಆಗುವ ನಿರೀಕ್ಷೆ ಇದೆ ಎಂದರು.
’ಬಾಗಿಲಿಗೆ ಬಂತು ಸರಕಾರ-ಸೇವೆಗೆ ಇರಲಿ ಸಹಕಾರ’
ಜನಸಾಮಾನ್ಯರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಮನೆ ಬಾಗಿಲಿಗೆ ಬರುತ್ತಿದ್ದಾರೆ, ಅವರ ಕಷ್ಟಗಳನ್ನು ಕೇಳಲು ನಾವೇ ಅವರ ಬಳಿ ಹೋಗಬೇಕು, ಅವರ ಒತ್ತಡ ಕಡಿಮೆ ಮಾಡುವ ಉದೇಶದಿಂದ ’ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಮುಂದಿನ ತಿಂಗಳು ದಿನಕ್ಕೆ ಎರಡು ಅಥವಾ ಮೂರು ವಿಧಾನಸಭಾ ಕ್ಷೇತ್ರಗಳಂತೆ ಬೆಂಗಳೂರಿನ 28 ಕ್ಷೇತ್ರಗಳ ಜನರ ಅಹವಾಲು ಸ್ವೀಕರಿಸಿ, ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ದೆಹಲಿ ಹಾಗೂ ಇತರೆಡೆ ಪ್ರವಾಸ ವೇಳೆ ಕಾರ್ಯಕ್ರಮಕ್ಕೆ ಬಿಡುವು ನೀಡಲಾಗುವುದು.
ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸ್ಥಳೀಯ ಶಾಸಕರು ಹಾಗೂ ಸಂಸದರಿಗೆ ಆಹ್ವಾನ ನೀಡುತ್ತೇವೆ ಎಂದರು.
ಲೋಕಸಭೆ ಚುನಾವಣೆ ಸಿದ್ಧತಾ ಸಭೆ
ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚಿಸಲು ಜನವರಿ 10 ರಂದು ಪಕ್ಷದ ನಾಯಕರು, ಶಾಸಕರು, ಎಐಸಿಸಿ ನಾಯಕರ ಜತೆ ಸಭೆ ಮಾಡುತ್ತೇವೆ.
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಸಭೆ ಇದೆ, ಅಭ್ಯರ್ಥಿ ಕುರಿತು ಕೆಲವು ಸಚಿವರು ವರದಿ ನೀಡಿದ್ದಾರೆ, ಅದರ ಸಮೀಕ್ಷೆ ನಡೆಸಬೇಕಿದೆ, ಈ ವಿಚಾರ ಚರ್ಚಿಸಲು ಜನವರಿ 4ರಂದು ದೆಹಲಿಗೆ ತೆರಳುತ್ತಿದ್ದೇವೆ.
ಸಚಿವ ಮಧು ಬಂಗಾರಪ್ಪ ವಿರುದ್ಧದ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ವ್ಯಾಪಾರ-ವ್ಯವಹಾರದಲ್ಲಿ ಹೆಚ್ಚುಕಮ್ಮಿ ಆಗುತ್ತದೆ, ಪ್ರಕರಣ ಏನೆಂಬ ಬಗ್ಗೆ ಗಮನ ಹರಿಸುತ್ತೇವೆ ಎಂದರು.
ಮುಖ್ಯಮಂತ್ರಿ ನಿರ್ಧಾರ ಉತ್ತಮ
ಅಲ್ಪಸಂಖ್ಯಾತರಿಗೆ ಸಾವಿರ ಕೋಟಿ ರೂ. ಕ್ರಿಯಾಯೋಜನೆ ನೀಡುವುದರಲ್ಲಿ ತಪ್ಪೇನಿದೆ, 224 ಕ್ಷೇತ್ರಗಳಿಗೆ ಅನುದಾನ ಹಂಚಿದರೆ ಎಷ್ಟು ಸಿಗುತ್ತದೆ, ಈ ಸಮುದಾಯವರು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ವಾಸವಿದ್ದಾರೆ, ಮುಖ್ಯಮಂತ್ರಿ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ ಎಂದರು.
ಬಿಜೆಪಿ ಓಲೈಕೆ ರಾಜಕಾರಣದ ಬಗ್ಗೆ ಟೀಕೆ ಮಾಡುತ್ತಿರಲಿ, ನಾವು ಬಡವರ ಪರ ಕೆಲಸ ಮಾಡುತ್ತಿರುತ್ತೇವೆ. ಚಂದ್ರಬಾಬು ನಾಯ್ಡು ಅವರೊಂದಿಗಿನದು ಸೌಜನ್ಯದ ಭೇಟಿ ಎಂದರು.
2 comments
[…] ರಾಜ್ಯ […]
[…] ರಾಜ್ಯ […]