ಕೇಂದ್ರ ಸಚಿವ ಸ್ಥಾನದ ಮೇಲೆ ಕಣ್ಣು
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿ.ಪಿ ಯೋಗೇಶ್ವರ್ ಸೇರಿದಂತೆ ಹಲವು ಮುಖಂಡರು ದೆಹಲಿ ರಾಜಕಾರಣಕ್ಕೆ ತೆರಳಲು ಆಸಕ್ತಿ ತೋರುತ್ತಿದ್ದಾರೆ.
ಹೀನಾಯ ಸೋಲು ಕಂಡಿದ್ದ ನಾಯಕರು
ರಾಜ್ಯ ಬಿಜೆಪಿ ಆಡಳಿತದಲ್ಲಿ ಸತತವಾಗಿ ಅಧಿಕಾರ ಅನುಭವಿಸಿದ ಗೋವಿಂದ ಕಾರಜೋಳ್, ಶ್ರೀರಾಮುಲು ಅಲ್ಲದೆ, ಸಿ.ಟಿ. ರವಿ, ಡಾ.ಕೆ.ಸುಧಾಕರ್ ಸೇರಿದಂತೆ ಕೆಲವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರು.
ಇವರೆಲ್ಲರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ಅಲೆಯಲ್ಲಿ ಜಯಗಳಿಸಿ ಸಂಸದರಾಗುದಷ್ಟೇ ಅಲ್ಲದೆ, ಸಚಿವ ಸ್ಥಾನವೂ ಧಕ್ಕಬಹುದೆಂಬ ಆಶಾಭಾವನೆಯಲ್ಲಿದ್ದಾರೆ.
ಬಸವರಾಜ ಬೊಮ್ಮಾಯಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದು ಕೇಂದ್ರ ರಾಜಕಾರಣಕ್ಕೆ ತೆರಳುವ ಉತ್ಸಾಹದಲ್ಲಿದ್ದಾರೆ.
ಹಿರಿತನ, ಜಾತಿ ಆಧಾರ
ಸಂಸದರಾದರೆ ತಮ್ಮ ಹಿರಿತನ, ಜಾತಿ ಆಧಾರದ ಮೇಲೆ ತಮಗೆ ಕೇಂದ್ರದಲ್ಲಿ ಅಧಿಕಾರ ದಕ್ಕಬಹುದು ಎಂಬ ಆಲೋಚನೆಯಲ್ಲಿದ್ದಾರೆ.
ಇನ್ನು ಗೋವಿಂದ ಕಾರಜೋಳ್ ವಿಜಯಪುರ ಮೀಸಲು ಕ್ಷೇತ್ರದಿಂದ, ಶ್ರೀರಾಮುಲು ಬಳ್ಳಾರಿ ಮೀಸಲು, ಸಿ.ಟಿ. ರವಿ ಬೆಂಗಳೂರು ಉತ್ತರ ಇಲ್ಲವೆ ಉಡುಪಿ-ಚಿಕ್ಕಮಗಳೂರು, ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಇಲ್ಲವೇ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯಲು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಬೆಂಗಳೂರು ಗ್ರಾಮಾಂತರದಿಂದ ಕಣಕ್ಕಿಳಿದು ಸಂಸದರಾಗಿ ಒಕ್ಕಲಿಗ ಕೋಟಾದ ಮೇಲೆ ಸಚಿವರಾಗಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ.
ಅಧಿಕಾರ ಪಡೆಯುವ ಹಂಬಲ
ಇದೇ ರೀತಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಪ್ರಭಾವೀ ನಾಯಕರುಗಳು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ಅಧಿಕಾರ ಪಡೆಯುವ ಹಂಬಲದಲ್ಲಿದ್ದಾರೆ, ಅಷ್ಟೇ ಅಲ್ಲ, ಟಿಕೆಟ್ ಪಡೆಯಲು ತಮ್ಮ ಮುಖಂಡರುಗಳ ಮೂಲಕ ಪ್ರಭಾವ ಬೀರುತ್ತಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವು ದಿನಗಳಲ್ಲೇ ಹಲವು ಕಾರಣಗಳಿಗೆ ತಮ್ಮ ವರ್ಚಸ್ಸನ್ನು ಕುಂದಿಸಿಕೊಂಡಿದೆ.
ಕುಂದುತ್ತಿರುವ ಗ್ಯಾರಂಟಿ ವರ್ಚಸ್ಸು
ಐದು ಗ್ಯಾರಂಟಿ ಯೋಜನೆಗಳ ಅನುಷ್ಟಾನದಿಂದ ಸರ್ಕಾರಕ್ಕೆ ಪ್ರಾರಂಭದಲ್ಲಿ ಇದ್ದ ವರ್ಚಸ್ಸು ನಂತರದ ಬೆಳವಣಿಗೆಗಳಲ್ಲಿ ಕುಂದುತ್ತಿದೆ ಎಂಬ ಭಾವನೆ ಬಿಜೆಪಿಯಲ್ಲಿದೆ.
ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಟಾನಕ್ಕೆ ಮುಂದಾದುದು, ಲಿಂಗಾಯತ ಹಾಗೂ ಒಕ್ಕಲಿಗರ ಕೆಂಗಣ್ಣಿಗೆ ಸರ್ಕಾರ ಗುರಿಯಾಗಿದೆ.
ಎರಡೂ ಸಮುದಾಯಗಳು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದವು, ಈ ಕಾರಣಕ್ಕೆ ವಿರೋಧವಾಗುವುದರ ಜೊತೆಗೆ ಅತಿಯಾಗಿ ಅಲ್ಪಸಂಖ್ಯಾತರನ್ನು ಓಲೈಸುತ್ತಿರುವುದು ಉಳಿದ ಸಮಾಜಗಳವರಿಗೆ ಕಿರಿಕಿರಿ ಉಂಟು ಮಾಡಿದೆ.
ಮತದಾರರಲ್ಲಿ ಬೇಸರ
ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಗುಂಗಿನಲ್ಲಿ ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ಕೊಡುತ್ತಿಲ್ಲ, ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯ ಕಾರ್ಯಗಳನ್ನೂ ಕೈಗೆತ್ತಿಕೊಳ್ಳಲಾಗುತ್ತಿಲ್ಲ, ಇದು ಮತದಾರರಲ್ಲಿ ಬೇಸರ ಮೂಡಿಸಿದೆ.
ಅಧಿಕಾರಕ್ಕೆ ಬರುತ್ತಿದ್ದಂತೆ ವರ್ಗಾವರ್ಗಿ ದಂಧೆಯೂ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಇದೆಲ್ಲದಕ್ಕೂ ಮಿಗಿಲಾಗಿ ಮತ್ತೆ ರಾಷ್ಟ್ರದಲ್ಲಿ ಸದೃಢ ಸರ್ಕಾರ ತರಲು ನರೇಂದ್ರ ಮೋದಿ ಅವರನ್ನೇ ಬೆಂಬಲಿಸಬೇಕೆಂಬ ಹುಮ್ಮಸ್ಸು ಮತದಾರರಲ್ಲಿ ಕಂಡುಬರುತ್ತಿದೆ.
ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಅಧಿಕಾರ ಇಲ್ಲದೆ ಮನೆಯಲ್ಲಿರುವ ಬಿಜೆಪಿ ನಾಯಕರು ಲೋಕಸಭಾ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.