ಅಡ್ಡಿಯಾಗುವ ಸಚಿವ, ಶಾಸಕರು ಲೋಕಸಭಾ ಕಣಕ್ಕೆ
ಬೆಂಗಳೂರು:ಅಧಿಕಾರದ ಗದ್ದುಗೆ ಹಿಡಿಯಲು ಅಡ್ಡಿಯಾಗುತ್ತಾರೆನ್ನುವ ಸಚಿವ, ಶಾಸಕರನ್ನು ಲೋಕಸಭಾ ಚುನಾವಣಾ ಕಣಕ್ಕಿಳಿಸಲು ಕಾಂಗ್ರೆಸ್ ರಾಜ್ಯಾಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.
ಮುಂಬರುವ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕರ್ನಾಟಕದ 28 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ತಂತ್ರಗಾರಿಕೆ ಸೇರಿದಂತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರಿಗೆ ವರಿಷ್ಠರು ಬುಲಾವ್ ಮಾಡಿದ್ದಾರೆ.
ನಾಳೆ ವರಿಷ್ಠರಿಗೆ ಪಟ್ಟಿ ಸಲ್ಲಿಕೆ
ವರಿಷ್ಠರ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿರುವ ಉಭಯ ನಾಯಕರು ನಾಳೆ 28 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಘಟಕ, ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಹಾಗೂ ಚುನಾವಣಾ ಪೂರ್ವ ಸಮೀಕ್ಷೆ ಆಧಾರದ ಮೇಲೆ ಪ್ರತಿ ಕ್ಷೇತ್ರಕ್ಕೆ ಸಂಭವನೀಯ ಮೂರು ಹೆಸರುಗಳನ್ನು ಪಟ್ಟಿ ಮಾಡಿದ್ದು ಅದನ್ನು ನಾಳೆ ವರಿಷ್ಠರಿಗೆ ಸಲ್ಲಿಸಿ ಚರ್ಚೆ ನಡೆಸಲಿದ್ದಾರೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಸಿದ್ಧಪಡಿಸಿರುವ ಪಟ್ಟಿಯಲ್ಲಿ 20 ಕ್ಷೇತ್ರಗಳಿಗೆ ಒಮ್ಮತ ಮತ್ತು ಸಮ್ಮತದ ಅಭ್ಯರ್ಥಿಗಳಿದ್ದರೆ, ಉಳಿದ 8 ಕ್ಷೇತ್ರಗಳಿಗೆ ಪ್ರತ್ಯೇಕ ಪಟ್ಟಿಯನ್ನು ಇಡುತ್ತಿದ್ದಾರೆ.
ಶಿವಕುಮಾರ್ ಸಿದ್ಧತೆ
ಶಿವಕುಮಾರ್ ಅವರು, ಸಚಿವರು ಮತ್ತು ಶಾಸಕರನ್ನು ನಿರ್ದಿಷ್ಟ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದರೆ ಗೆಲುವು ಸಾಧ್ಯ ಎಂಬ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ವರಿಷ್ಠರ ಮುಂದೆ ತಮ್ಮ ವಾದ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್ ಅಲ್ಲದೆ, ಇತರ ಮುಖಂಡರು ಭಾಗವಹಿಸಲಿರುವ ಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರತಿ ಕ್ಷೇತ್ರದ ಬಗ್ಗೆ ಮಾಹಿತಿ ಮತ್ತು ಅಭ್ಯರ್ಥಿ ಗೆಲುವಿಗೆ ಯಾವ ಮಾನದಂಡಗಳನ್ನು ಅನುಸರಿಸಬೇಕು ಎಂಬ ಬಗ್ಗೆ ವಿವರಿಸಲಿದ್ದಾರೆ.
ಅಧಿಕಾರ ಹಂಚಿಕೆ ಸೂತ್ರದಂತೆ ಸಿದ್ದರಾಮಯ್ಯ ಅವರು ಎರಡು ವರ್ಷಗಳ ಅವಧಿ ಪೂರ್ಣಗೊಳಿಸಿದ ನಂತರ ಉಪಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಬೇಕು.
ಮುಖ್ಯಮಂತ್ರಿ ಆಪ್ತರ ಖ್ಯಾತೆ
ಅಧಿಕಾರ ಹಸ್ತಾಂತರಕ್ಕೆ ಸಮಯ ಇನ್ನೂ ದೂರವಿದ್ದರೂ ಮುಖ್ಯಮಂತ್ರಿ ಅವರ ಆಪ್ತರು ಈಗಿನಿಂದಲೇ ಖ್ಯಾತೆ ತೆಗೆದು ಉಪಮುಖ್ಯಮಂತ್ರಿ ಅವರಿಗೆ ದೊರೆಯಬಹುದಾದ ಬಡ್ತಿಗೆ ಅಡ್ಡಗಾಲು ಹಾಕಿದ್ದಾರೆ.
ತಮಗೆ ಅಧಿಕಾರ ತಪ್ಪಿಸಲು ಸಂಚು ನಡೆಸುತ್ತಿರುವವರನ್ನೇ ಲೋಕಸಭಾ ಚುನಾವಣಾ ಕಣಕ್ಕೆ ಇಳಿಸಿದರೆ ತಮ್ಮ ಮುಂದಿನ ಹಾದಿ ಸುಗಮ ಎಂಬ ಉದ್ದೇಶದಿಂದ ಶಿವಕುಮಾರ್ ಅವರು, ಬೆಳಗಾವಿ, ತುಮಕೂರು, ಕೊಪ್ಪಳ, ಬಾಗಲಕೋಟೆ, ರಾಯಚೂರು, ಬೆಂಗಳೂರು ಕೇಂದ್ರ ಸೇರಿದಂತೆ ಎಂಟು ಕ್ಷೇತ್ರಗಳಲ್ಲಿ ಸಚಿವರು, ಶಾಸಕರನ್ನು ಕಣಕ್ಕಿಳಿಸಲು ತಂತ್ರಗಾರಿಕೆ ರೂಪಿಸಿ ವರಿಷ್ಠರ ಮೂಲಕ ಒತ್ತಡ ತರುವ ಯತ್ನ ಮಾಡಿದ್ದಾರೆ.
ಸಿದ್ದರಾಮಯ್ಯ ವಿರೋಧ
ಶಿವಕುಮಾರ್ ಅವರ ಈ ತಂತ್ರಕ್ಕೆ ಸಿದ್ದರಾಮಯ್ಯ ವಿರೋಧವಿದ್ದು, ಅಷ್ಟೇ ಅಲ್ಲದೆ, ತಮ್ಮ ಬೆಂಬಲಿಗ ಶಾಸಕರನ್ನು ಕಣಕ್ಕಿಳಿಸಲು ಆಸಕ್ತಿ ತೋರುತ್ತಿಲ್ಲ.
ಉಭಯ ನಾಯಕರು ನಾಳೆ ತಮ್ಮ ವಾದವನ್ನು ವರಿಷ್ಠರ ಮುಂದೆ ಮಂಡಿಸಲಿದ್ದಾರೆ, ಅಂತಿಮ ನಿರ್ಧಾರವನ್ನು ಎಐಸಿಸಿ ತೆಗೆದುಕೊಳ್ಳಬೇಕಿದೆ.
ರಾಜ್ಯ ನಾಯಕರು ನೀಡಿರುವ ಸಂಭವನೀಯ ಪಟ್ಟಿಯನ್ನು ಮುಂದಿಟ್ಟುಕೊಂಡು ಎಐಸಿಸಿ ಮತ್ತೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ ಈ ತಿಂಗಳ ಮೂರನೇ ವಾರದ ವೇಳೆಗೆ ರಾಜ್ಯದ 15 ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟಿಸಲಿದೆ.
ರಾಷ್ಟ್ರದ 252 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಎಐಸಿಸಿ ಪ್ರಕಟಿಸಲಿದ್ದು ಆ ಪಟ್ಟಿಯಲ್ಲಿ ಕರ್ನಾಟಕದ ಈ ಕ್ಷೇತ್ರಗಳು ಸೇರಿರಲಿವೆ.