ಅಗ್ಗದ ಗ್ಯಾರಂಟಿ ಶಕ್ತಿ ಯೋಜನೆಯಿಂದ ಗಂಡಾಂತರ
ಬೆಂಗಳೂರು:ಚುನಾವಣೆ ಲಾಭಕ್ಕಾಗಿ ಅಗ್ಗದ ಗ್ಯಾರಂಟಿಗಳನ್ನು ರೂಪಿಸಿ ಜಾರಿಗೆ ತಂದಿರುವ ಕಾಂಗ್ರೆಸ್ ಸರ್ಕಾರ ಶಾಲಾ ಮಕ್ಕಳ ಪ್ರಾಣ ಹಾಗೂ ಭವಿಷ್ಯಕ್ಕೆ ಮಾರಕವಾಗಿದೆ.
ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ ಎಂದು ಹೊರಟ ಕಾಂಗ್ರೆಸ್ ಸರ್ಕಾರ ಶಾಲಾ ಮಕ್ಕಳ ಜೀವ ತೆಗೆಯುತ್ತಿದೆ. ಇದು ಕರ್ನಾಟಕದ ಮಾದರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ’ಎಕ್ಸ್’ ಟ್ವಿಟರ್ ಖಾತೆಯಲ್ಲಿ ಶಾಲಾ ಮಕ್ಕಳು ಬಸ್ ಮುಂಭಾಗದ ಬಾಗಿಲಿನ ಫುಟ್ಬೋರ್ಡ್ ಮೇಲೆ ನೇತಾಡಿಕೊಂಡು ಜೀವಕ್ಕೆ ಅಪಾಯ ತರುವಂತಹ ಪರಿಸ್ಥಿತಿಯಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೊ ಹಂಚಿಕೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಟ್ಯಾಗ್ ಮಾಡಿದ್ದಾರೆ.
ಶಾಲಾ ಮಕ್ಕಳಿಗೆ ಬಸ್‌ನಲ್ಲಿ ಸ್ಥಳವೇ ಸಿಗುತ್ತಿಲ್ಲ
ನಿತ್ಯವೂ ಶಾಲೆಗೆ ಹೋಗಬೇಕಾಗಿರುವ ಮಕ್ಕಳಿಗೆ ಶಕ್ತಿ ಯೋಜನೆಯ ಪರಿಣಾಮ ಬಸ್ಸುಗಳಲ್ಲಿ ಪ್ರಯಾಣಕ್ಕೆ ಸ್ಥಳಾವಕಾಶ ಸಿಗುತ್ತಿಲ್ಲ, ಶಿಕ್ಷಕರು, ಕಾರ್ಮಿಕರೂ ಇದೇ ದುಃಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಆಟೋ, ಲಗೇಜ್ ಆಟೋ, ಗೂಡ್ಸ್ ವಾಹನಗಳನ್ನು ಹತ್ತಿ ಅಪಾಯಕಾರಿ ರಸ್ತೆಗಳಲ್ಲಿ ಮಕ್ಕಳು ಶಾಲೆಗೆ ಹೋಗಿಬರುವ ಪರಿಸ್ಥಿತಿ ನಿರ್ಮಣವಾಗಿದೆ ಎಂದಿದ್ದಾರೆ.
ರಾತ್ರಿಯಾದರೂ ಮಕ್ಕಳು ಮನೆ ಸೇರುತ್ತಿಲ್ಲ
ಒಂದೆಡೆ ಬಸ್ಸುಗಳ ಕೊರತೆ, ಇನ್ನೊಂದೆಡೆ ಮಹಿಳೆಯರು ಪ್ರವಾಸಿ ತಾಣಗಳಿಗೆ ಮುಗಿಬಿದ್ದ ಪರಿಣಾಮ ಮಕ್ಕಳು ರಾತ್ರಿಯಾದರೂ ಮನೆ ತಲುಪುತ್ತಿಲ್ಲ ಎನ್ನುವ ವರದಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವುದನ್ನು ಕಂಡು ಆಘಾತವಾಗಿದೆ.
ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಿ, ಶಾಲಾ ಮಕ್ಕಳು ಹಾಗೂ ಹೆಣ್ಣು ಮಕ್ಕಳ ಪರಿಸ್ಥಿತಿ ಅಪಾಯ ಹಾಗೂ ಆತಂಕಕ್ಕೆ ಸಿಲುಕಿದೆ. ಪರೀಕ್ಷೆ ಸಮಯದಲ್ಲಂತೂ ಈ ಶಾಲಾ ಮಕ್ಕಳ ಸಂಕಷ್ಟ ಹೇಳಲಸಾಧ್ಯ.
ಶಕ್ತಿ ಯೋಜನೆ ಬಗ್ಗೆ ತಮ್ಮ ತಕರಾರು ಇಲ್ಲ, ಆದರೆ, ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಗೆ ಸಂಪೂರ್ಣ ಬೆಂಬಲವಿದೆ. ರಾಜ್ಯ ಸರಕಾರ ಕೂಡಲೇ ಈ ಬಗ್ಗೆ ತುರ್ತು ಕ್ರಮ ವಹಿಸಿ, ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.