ಕೆಲವು ಸಚಿವರ ಮೇಲೂ ಮೊಕದ್ದಮೆಗಳಿವೆ
ಬೆಂಗಳೂರು:ಸಿದ್ದರಾಮಯ್ಯ ಸಂಪುಟದ ಕೆಲವು ಸಚಿವರ ಮೇಲೆ ಮೊಕದ್ದಮೆಗಳಿದ್ದು ಅವರನ್ನು ಮೊದಲು ಬಂಧಿಸಿ, ನಮ್ಮ ಕರಸೇವಕರನ್ನಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 50,000 ಕರಸೇವಕರ ಮೇಲೆ ಮೊಕದ್ದಮೆಗಳಿವೆ, ಅವರೆಲ್ಲರನ್ನೂ ಬಂಧಿಸಿ ಯಾವ ಜೈಲಿಗೆ ಹಾಕುತ್ತೀರಿ ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದ್ದಾರೆ.
ರಾಮನ ಸೇವಕರ ಮೇಲೆ ಏಕೆ ಕೆಂಗಣ್ಣು
ನಿಮ್ಮ ಸಂಪುಟದ ನಾಗೇಂದ್ರ ಅವರ ಮೇಲೆ 23 ಪ್ರಕರಣಗಳು ಬಾಕಿ ಇವೆ, ಇದೇ ರೀತಿ ಇನ್ನೂ ಹಲವು ಸಚಿವರ ಮೇಲೂ ಇದೆ, ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ, ರಾಮನ ಸೇವಕರ ಮೇಲೆ ಏಕೆ ಕೆಂಗಣ್ಣು.
ದೇವಸ್ಥಾನದ ಒಳಗೆ ತೆರಳಿ ದೇವರಿಗೆ ಕೈಮುಗಿಯಿರಿ ಎಂದರೆ ಆಗಲ್ಲ ಎನ್ನುತ್ತೀರಿ, ಅದೇ ಬೇರೆ ಸಮಯದಾಯದವರ ಪೂಜಾಸ್ಥಳದ ಒಳಗೆ ತೆರಳಿ ಟೋಪಿ ಹಾಕಿಕೊಂಡು ಪ್ರಾರ್ಥನೆ ಮಾಡುತ್ತೀರಿ ಎಂದಿದ್ದಾರೆ.
ಹಿಂದೂ ಎನ್ನುವುದು ಒಂದು ಪರಂಪರೆ, ಹಿಂದೂ ರಾಷ್ಟ್ರ ಎನ್ನದೆ, ಇನ್ನೇನು ಅನ್ನಬೇಕು, ನಿಮ್ಮ ನಿಲುವುಗಳಿಂದ ರಾಜ್ಯದ ಜನತೆ ಭಯಭೀತರಾಗಿದ್ದಾರೆ.
ಕರಸೇವಕರ ಮೇಲೆ ಪ್ರಕರಣ
ಕರಸೇವಕರು ರಾಮ ಮಂದಿರ ಉದ್ಘಾಟನೆಗೆ ತೆರಳಬಾರದು ಎಂಬ ಏಕೈಕ ಕಾರಣಕ್ಕೆ ಅವರುಗಳ ಮೇಲೆ ಪ್ರಕರಣಗಳನ್ನು ದಾಖಲಿಸಿ ಬಂಧಿಸುತ್ತಿದ್ದೀರಿ.
ನಿಮ್ಮ ಮನೋಭಾವನೆ ಇದಾದರೆ, ನಿಮ್ಮ ಪಕ್ಷದ ಹಿರಿಯ ಸದಸ್ಯ ಬಿ.ಕೆ. ಹರಿಪ್ರಸಾದ್, ಗೋದ್ರಾ ಘಟನೆ ಮರುಕಳಿಸುತ್ತದೆ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.
ರಾಮ ಮಂದಿರ ಹೋರಾಟ 500 ವರ್ಷಗಳದ್ದು, ಇದಕ್ಕಾಗಿ ಸಾವಿರಾರು ರಾಜರು ಹೋರಾಡಿದ್ದಾರೆ, ಲಕ್ಷಾಂತರ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಕಾಂಗ್ರೆಸ್‌ನ ಹಲವರ ಮೇಲೆ ಪ್ರಕರಣಗಳಿವೆ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಶಶಿ ತರೂರ್ ಸೇರಿದಂತೆ ನಿಮ್ಮ ಪಕ್ಷದ ಹಲವರ ಮೇಲೆ ಪ್ರಕರಣಗಳಿವೆ, ನಿಮ್ಮ ಸಂಪುಟದಲ್ಲಿರುವವರ ಮೇಲೆ ಗಣಿ ಹಗರಣಗಳಿವೆ, ಇವರಾರನ್ನೂ ಬಂಧಿಸುವ ಕೆಲಸ ಮಾಡುತ್ತಿಲ್ಲ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಹಿಂದೆ ಜೈಲಿನಿಂದ ಬಂದಾಗ ಮತ್ತು ಅವರ ಮೇಲೆ ಪ್ರಕರಣ ದಾಖಲಾದಾಗ, 5,000 ಜನ ಧರಣಿ ನಡೆಸಿದರು, ಅಂತಹವರ ಮೇಲೂ ಪ್ರಕರಣಗಳು ದಾಖಲಾದವು, ಅವರನ್ಯಾಕೆ ನೀವು ಬಂಧಿಸಿಲ್ಲ ಎಂದು ಪ್ರಶ್ನಿಸಿದರು.
ರಾಮ ಮಂದಿರ ಉದ್ಘಾಟನೆ ಶತಃಸಿದ್ಧ.
ಮೂವತ್ತು ವರ್ಷದ ಹಿಂದೆ ದಾಖಲಾದ ಪ್ರಕರಣವನ್ನು ಕೆಣಕಿ ಇದೀಗ ಬಂಧಿಸುತ್ತಿದ್ದೀರಿ, ಇದರ ಅರ್ಥ ಏನು, ನಾನೂ ಗೃಹ ಸಚಿವನಾಗಿದ್ದೆ, ನಿಮ್ಮ ಬೆಂಬಲಿಗರೂ ಹಾಗೂ ಕಾರ್ಯಕರ್ತರನ್ನು ಗುರಿ ಮಾಡಿಕೊಂಡು ಬಂಧಿಸಿದೆವಾ, ನಿಮ್ಮ ಉದ್ದೇಶ ಇಷ್ಟೆ ಅಯೋಧ್ಯೆಗೆ
ಹೋಗುವವರನ್ನು ತಡೆಯಬೇಕೆನ್ನುವುದು, ನೀವು ಎಷ್ಟೇ ತಡೆಯಿರಿ ರಾಷ್ಟ್ರದ ಕೋಟ್ಯಂತರ ಭಕ್ತರ ಸಮ್ಮುಖದಲ್ಲಿ ರಾಮ ಮಂದಿರ ಉದ್ಘಾಟನೆ ಆಗುವುದು ಶತಃಸಿದ್ಧ.
ನಿಮ್ಮ ರಣಹೇಡಿ ರಾಜಕಾರಣಕ್ಕೆ ನಾವು ಬೆದರುವುದಿಲ್ಲ, ನಾವು ಏನು ಮಾಡಬೇಕೋ ಅದನ್ನು ಹಿಂದೂಗಳ ಪರ ಮಾಡಿಯೇ ಮಾಡುತ್ತೇವೆ ಎಂದರು.