ಲೋಕಸಭೆಗೆ ನನ್ನ ಸ್ಪರ್ಧೆ ಇಲ್ಲ
ಬೆಂಗಳೂರು: ನಾನಾಗಲಿ, ನನ್ನ ಕುಟುಂಬದವರಾಗಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ, ರಾಜ್ಯ ರಾಜಕಾರಣದಲ್ಲೇ ಮುಂದುವರೆಯುತ್ತೇನೆ ಎಂದು ಮುಖ್ಯಮಂತ್ರಿ ಅವರ ಆಪ್ತ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ, ಚಿಕ್ಕೋಡಿ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರದಿಂದಲೂ ನನ್ನ ಸ್ಪರ್ಧೆ ಇಲ್ಲ ಎಂದರು.
ದೆಹಲಿಯಲ್ಲಿ ಸಭೆ
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ದೆಹಲಿಯಲ್ಲಿಂದು ಎಐಸಿಸಿ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಬೆನ್ನಲ್ಲೇ ಜಾರಕಿಹೊಳಿ ಈ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಈ ಬಾರಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಲಿ, ನಾವು ಅವರ ಪರ ನಿಂತು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ.
ಬೆಳಗಾವಿ ಉಪಚುನಾವಣೆಯಲ್ಲಿ ಕಾರಣಾಂತರಗಳಿಂದಷ್ಟೇ ನಾನು ಸ್ಪರ್ಧಿಸಿ ಅಲ್ಪ ಮತಗಳಿಂದ ಪರಾಭವಗೊಂಡೆ. ಹಾಗೆಂದು ಈಗ ಸಾರ್ವತ್ರಿಕ ಚುನಾವಣೆಯಲ್ಲಿ ಕಣಕ್ಕಿಳಿಯುವ ಆಸಕ್ತಿ ಇಲ್ಲ.
ಮುಖ್ಯಮಂತ್ರಿ ಅವರು ಒಳ್ಳೆ ಖಾತೆ ನೀಡಿ ಜನರ ಕೆಲಸ ಮಾಡುವಂತೆ ಅಧಿಕಾರ ಕೊಟ್ಟಿದ್ದಾರೆ, ಅದನ್ನು ನಿಷ್ಠೆಯಿಂದ ಮಾಡುತ್ತೇನೆ.
ಉಪಮುಖ್ಯಮಂತ್ರಿಗಳ ಬೇಡಿಕೆ ಮುಂದುವರಿಯುತ್ತೆ
ಮೂರು ಉಪಮುಖ್ಯಮಂತ್ರಿಗಳ ಬೇಡಿಕೆಯಿಂದ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ದೆಹಲಿಗೆ ತೆರಳುವಾಗ ನಾನೂ ಅವರ ಕಾರಿನಲ್ಲೇ ವಿಮಾನ ನಿಲ್ದಾಣದವರೆಗೂ ಜೊತೆಯಲ್ಲೇ ಹೋಗಿದ್ದೆ, ನನ್ನ ಖಾತೆಗೆ ಸಂಬಂಧಿಸಿದ ವಿಷಯ ಮಾತ್ರ ಚರ್ಚಿಸಿದೆ ಎಂದರು.
ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ಸಚಿವರು, ಶಾಸಕರನ್ನು ಈ ಬಾರಿ ಲೋಕಸಭಾ ಚುನಾವಣಾ ಕಣಕ್ಕಿಳಿಸಲು ಕೆಪಿಸಿಸಿ ಅಧ್ಯಕ್ಷರು ಆಸಕ್ತಿ ಹೊಂದಿದ್ದಾರೆ, ಅಷ್ಟೇ ಅಲ್ಲ, ವರಿಷ್ಠರಿಗೂ ಕ್ಷೇತ್ರಗಳನ್ನು ಮತ್ತು ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.
ವರ್ಚಸ್ವಿ ಮತ್ತು ಸಮರ್ಥ ಅಭ್ಯರ್ಥಿ ಆಯ್ಕೆ
ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಂಬರುವ ಚುನಾವಣೆಯಲ್ಲಿ ಜಂಟಿಯಾಗಿ ಕಣಕ್ಕಿಳಿಯುವುದರಿಂದ ನಾವು ವರ್ಚಸ್ವಿ ಮತ್ತು ಸಮರ್ಥ ಅಭ್ಯರ್ಥಿಗಳನ್ನು ಕೆಲವು ಕ್ಷೇತ್ರಗಳಲ್ಲಿ ಇಳಿಸಲೇಬೇಕೆಂಬ ವಾದ ಶಿವಕುಮಾರ್ ಅವರದ್ದಾಗಿದೆ.
ಶಿವಕುಮಾರ್ ದೂರದೃಷ್ಟಿ ಮತ್ತು ರಾಜಕೀಯ ಉದ್ದೇಶದಿಂದ ಕೆಲವರನ್ನು ಲೋಕಸಭಾ ಚುನಾವಣಾ ಕಣಕ್ಕಿಳಿಸಲು ತಂತ್ರಗಾರಿಕೆ ನಡೆಸುತ್ತಿದ್ದಾರೆ ಎಂಬ ಭಾವನೆ ಕೆಲವರಲ್ಲಿದೆ.
ಕೆಪಿಸಿಸಿ ಅಧ್ಯಕ್ಷರ ತಂತ್ರಗಾರಿಕೆಯನ್ನು ಅರಿತ ಕೆಲವರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ತಾವು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದು, ಅವರಲ್ಲಿ ಜಾರಕಿಹೊಳಿ ಸಹಾ ಒಬ್ಬರು.
ಜಾರಕಿಹೊಳಿ ಹೇಳಿಕೆ: ಮತ್ತಷ್ಟು ಕುತೂಹಲ
ದೆಹಲಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಇತ್ತ ಜಾರಕಿಹೊಳಿ ಇಂತಹ ಹೇಳಿಕೆ ನೀಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
ಈ ಮಧ್ಯೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಚಿವರು ಕಣಕ್ಕಿಳಿಯಬೇಕಾದ ಅನಿವಾರ್ಯತೆ ಬಂದಲ್ಲಿ ಸ್ಪರ್ಧಿಸುತ್ತಾರೆ ಎಂದರು.
ಕಳೆದ ಚುನಾವಣೆಯಲ್ಲಿ ಕೃಷ್ಣಬೈರೇಗೌಡ ಅವರು ಕಣಕ್ಕಿಳಿದಿದ್ದರಲ್ಲ, ಅಭ್ಯರ್ಥಿಗಳ ಆಯ್ಕೆಯ ಸಹಜ ಪ್ರಕ್ರಿಯೆ ನಡೆಯುತ್ತಿದೆ, ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.