ಬಣ ರಾಜಕೀಯ ಶಮನಕ್ಕೆ ಸುರ್ಜೇವಾಲ ಎಂಟ್ರಿ
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿನ ಬಣ ರಾಜಕೀಯ ಶಮನಗೊಳಿಸಲು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಧ್ಯ ಪ್ರವೇಶಿಸಲಿದ್ದಾರೆ.
ಎಐಸಿಸಿ ವರಿಷ್ಠರ ಅಣತಿಯಂತೆ ಸುರ್ಜೇವಾಲ ಜನವರಿ 10ಕ್ಕೆ ಮೂರು ದಿನಗಳ ರಾಜ್ಯ ಭೇಟಿಗೆ ಆಗಮಿಸುತ್ತಿದ್ದಾರೆ. ಬಣ ರಾಜಕೀಯ ತಿಳಿಗೊಳಿಸುವುದರ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸುದೀರ್ಘ ಕಸರತ್ತು ನಡೆಸಲಿದ್ದಾರೆ.
ತೃಪ್ತರಾಗದ ವರಿಷ್ಠರು
ಅಭ್ಯರ್ಥಿಗಳ ಆಯ್ಕೆ ಸಂಬಂಧ ರಾಜ್ಯ ಘಟಕ ಪ್ರತ್ಯೇಕ ವರದಿಗಳನ್ನು ನೀಡಿದ್ದರೂ ಅದಕ್ಕೆ ತೃಪ್ತರಾಗದ ವರಿಷ್ಠರು ಪಕ್ಷದ ಎಲ್ಲಾ ಹಂತದ ಕಾರ್ಯಕರ್ತರ ಅಭಿಪ್ರಾಯ ಪಡೆಯಲು ನಿರ್ಧರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಆಂತರಿಕ ಕಿತ್ತಾಟ ವರಿಷ್ಠರಿಗೂ ತಲೆನೋವಾಗಿದೆ.
ಮೇಲ್ನೋಟಕ್ಕೆ ಎಲ್ಲವೂ ಸರಿ ಎನಿಸಿದರೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ದ್ವಂಧ್ವ ನಿಲುವುಗಳು ಕಂಡುಬಂದಿವೆ.
ಜೊತೆಗೆ ಮುಖ್ಯಮಂತ್ರಿ ಬಣಕ್ಕೆ ಸೇರಿದ ಪರಿಶಿಷ್ಟ ಜಾತಿ, ವರ್ಗದ ಕೆಲವು ಸಚಿವರು ಮತ್ತು ಶಾಸಕರು, ಶಿವಕುಮಾರ್ ಅವರಿಗೆ ಕಡಿವಾಣ ಹಾಕಲು ಲೋಕಸಭಾ ಚುನಾವಣೆಯನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.
ಮುಖ್ಯಮಂತ್ರಿ ಮೇಲೆ ಒತ್ತಡ
ಚುನಾವಣೆಗೂ ಮುನ್ನ ಜಾತಿಗೊಂದು ಉಪಮುಖ್ಯಮಂತ್ರಿ ಸ್ಥಾನಗಳನ್ನು ನೀಡಬೇಕೆಂದು ಈ ಬಣ ವರಿಷ್ಠರು ಹಾಗೂ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ.
ಪರಿಶಿಷ್ಟ ಜಾತಿ, ವರ್ಗ ಹಾಗೂ ವೀರಶೈವ ಸಮಯದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಪಕ್ಷ ಮತ್ತು ಸರ್ಕಾರಕ್ಕೆ ಲಾಭವಾಗುತ್ತದೆಯೇ ಹೊರತು ನಷ್ಟವಿಲ್ಲ ಎಂಬ ವಾದ ಮಂಡಿಸುತ್ತಿದ್ದಾರೆ.
ಪಕ್ಷದ ಇಂತಹ ನಿರ್ಧಾರ ಕೈಗೊಳ್ಳುವುದರಿಂದ ಯಾರಿಗೂ ನಷ್ಟವಾಗುವುದಿಲ್ಲ, ಹಿರಿಯರಿಗೆ ಅವಕಾಶ ಮಾಡಿಕೊಟ್ಟರೆ ಗೌರವ ಹೆಚ್ಚುತ್ತದೆ ಮತ್ತು ಚುನಾವಣೆಯಲ್ಲಿ ಪಕ್ಷದ ಮತ ಗಳಿಕೆಯಲ್ಲಿ ಶೇಕಡಾವಾರು ಹೆಚ್ಚಳವಾಗಲಿದೆ ಎನ್ನುತ್ತಿದ್ದಾರೆ.
ಅಷ್ಟೇ ಅಲ್ಲ ಕಳೆದ ಗುರುವಾರ ರಾತ್ರಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಈ ಬಣದ ನಾಯಕರು ತೆಗೆದುಕೊಂಡ ತೀರ್ಮಾನಗಳನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಹಕಾರಿ ಸಚಿವ ರಾಜಣ್ಣ, ನಿನ್ನೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಭೆಯ ಮಾಹಿತಿ ನೀಡಿರುವುದಲ್ಲದೆ, ವರಿಷ್ಠರ ಗಮನಕ್ಕೆ ತಂದು ಹಿರಿಯ ಸಚಿವರಿಗೆ ಬಡ್ತಿ ನೀಡುವಂತೆಯೂ ಕೋರಿದ್ದಾರೆ.
ಬಣ ದೆಹಲಿಗೆ ಬಂದರೆ ಮತ್ತಷ್ಟು ಗೊಂದಲ
ತಮ್ಮ ಹಕ್ಕೊತ್ತಾಯಕ್ಕೆ ಈ ಬಣ ದೆಹಲಿಗೆ ಬಂದರೆ ಪಕ್ಷದಲ್ಲಿ ಮತ್ತಷ್ಟು ರಾಜಕೀಯ ಗೊಂದಲ ಉಂಟಾಗಲಿರುವುದರಿಂದ ವರಿಷ್ಠರು ಸುರ್ಜೇವಾಲ ಅವರನ್ನು ಕಳುಹಿಸುತ್ತಿದ್ದಾರೆ.
ಸುರ್ಜೇವಾಲ ಮುಖ್ಯಮಂತ್ರಿ ಬಣ ಹಾಗೂ ವಿರೋಧಿ ಗುಂಪುಗಳ ಅಭಿಪ್ರಯಗಳನ್ನೂ ಈ ಸಂದರ್ಭದಲ್ಲಿ ಪಡೆದು ವರಿಷ್ಠರ ಗಮನಕ್ಕೆ ತರಲಿದ್ದಾರೆ.
ಬಣ ರಾಜಕೀಯವನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಹಾಗೂ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಕಳೆದ ಚುನಾವಣೆಯಲ್ಲಿ ಸೋತವರು ಮತ್ತು ಗೆದ್ದವರ ಅಭಿಪ್ರಾಯಗಳನ್ನು ಸುರ್ಜೇವಾಲ ಆಲಿಸಲಿದ್ದಾರೆ.
ಕಾರ್ಯಕರ್ತರು ನೀಡುವ ವರದಿ ಹಾಗೂ ರಾಜ್ಯ ಘಟಕ ನೀಡಿರುವ ವರದಿಯನ್ನು ಹೋಲಿಕೆ ಮಾಡಿ ವರಿಷ್ಠರಿಗೆ ಮತ್ತೊಂದು ವರದಿ ನೀಡಲಿದ್ದಾರೆ.
1 comment
[…] ರಾಜ್ಯ […]