2024ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಭಾರತ ಚುನಾವಣಾ ಆಯೋಗವು ಅರ್ಹತಾ ದಿನಾಂಕ:01.01.2024ರ ಸಂಬಂಧ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ವೇಳಾಪಟ್ಟಿಯನ್ನು ಪರಿಷ್ಕರಿಸಿ ಅಂತಿಮ ದಿನಾಂಕ ಹೊರಡಿಸಿದ್ದು, ಪಟ್ಟಿಯಲ್ಲಿ ಅಗತ್ಯ ತಿದ್ದುಪಡಿ, ವಿಳಾಸ ಬದಲಾವಣೆ, ವಿವಿಧ ನಮೂನೆಯ ಅರ್ಜಿ ಫಾರಂ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿ ಅಂತಿಮ ಪ್ರಕಟಣೆಗಾಗಿ ಆಯೋಗದ ಅನುಮತಿ ಪಡೆಯುವುದು ಹಾಗೂ ಡೇಟಾಬೇಸ್ನ್ನು ನವೀಕರಿಸುವುದು, ಪೂರಕಗಳ ಮುದ್ರಣ ಅವಧಿ ಜ.17 ಮತ್ತು ಜ.22 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.
ಅರ್ಹತಾ ದಿನಾಂಕ:01.01.2024ಕ್ಕೆ 18 ವರ್ಷ ಪೂರ್ಣಗೊಂಡ ಎಲ್ಲಾ ಅರ್ಹ ಮತದಾರರು ನಮೂನೆ-6 ಅರ್ಜಿ ಸಲ್ಲಿಸಬಹುದು. ಹೆಸರು, ವಿಳಾಸ, ಭಾವಚಿತ್ರ ತಿದ್ದುಪಡಿಗಾಗಿ ನಮೂನೆ-8 ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು (ಮರಣ ಹೊಂದಿದ ಮನೆಯ ಸಂಬಂಧಿಕರು) ನಮೂನೆ-7 ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೆ ನಮೂನೆ-6, 7 ಮತ್ತು 8 ಸಲ್ಲಿಕೆಗೆ ಅವಕಾಶ
ಚುನಾವಣಾ ಆಯೋಗದ ಅಧಿಸೂಚನೆಯಲ್ಲಿ ನಿಗದಿಪಡಿಸಿದಂತೆ ದಿನಾಂಕ 27.12.2023 ರಿಂದ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಅರ್ಹ ಮತದಾರರು ನಮೂನೆ-6, 7 ಮತ್ತು 8 ರಲ್ಲಿ ಚುನಾವಣಾ ಆಯೋಗವು ಸೂಚಿಸಿದಂತೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಹ ಮತದಾರರು ಹೆಚ್ಚಿನ ಆಸಕ್ತಿ ವಹಿಸಿ ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಂಡು, ಸುಭದ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.