ಬೇಡಿಕೆ ಬದಿಗಿರಿಸಿ, 26 ಲೋಕಸಭಾ ಕ್ಷೇತ್ರ ಗೆಲ್ಲಿಸಿ
ಬೆಂಗಳೂರು:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ 28 ಸ್ಥಾನಗಳ ಪೈಕಿ 26 ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರಲೇಬೇಕೆಂದು ಕಾಂಗ್ರೆಸ್ ವರಿಷ್ಠರು ಗುರಿ ನೀಡಿದ್ದಾರೆ.
ಚುನಾವಣೆ ಮುಗಿಯುವವರೆಗೂ ಉಪಮುಖ್ಯಮಂತ್ರಿ ಬೇಡಿಕೆ ಸೇರಿದಂತೆ ನಿಮ್ಮೆಲ್ಲಾ ಬೇಡಿಕೆಗಳನ್ನು ಬದಿಗಿರಿಸಿ ಗುರಿ ತಲುಪಲು ಕಾರ್ಯತಂತ್ರ ರೂಪಿಸಿ ಎಂದು ಆದೇಶ ಮಾಡಿದ್ದಾರೆ.
28 ಸಚಿವರಿಗೆ ಕ್ಷೇತ್ರ ಹೊಣೆಗಾರಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಹೊರತುಪಡಿಸಿ ಉಳಿದ 28 ಸಚಿವರಿಗೆ ಒಂದೊಂದು ಕ್ಷೇತ್ರದ ಹೊಣೆಗಾರಿಕೆ ನೀಡಿದ್ದಾರೆ.
ಉಸ್ತುವಾರಿ ವಹಿಸಿಕೊಂಡಿರುವ 28 ಸಚಿವರನ್ನು ದೆಹಲಿಗೆ ಬರುವಂತೆ ವರಿಷ್ಠರು ಆದೇಶ ಮಾಡಿದ್ದು, ಇವರಿಗೆ ಚುನಾವಣೆ ಯಾವ ರೀತಿ ಗೆಲ್ಲಬೇಕು ಎಂಬ ಬಗ್ಗೆ ದೆಹಲಿ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಜನವರಿ 11ರ ಬೆಳಗ್ಗೆ 9 ಗಂಟೆಗೆ ಸಚಿವರಿಗೆ ಪಾಠ ಮಾಡಲಿದ್ದಾರೆ.
ಸಂಪುಟ ಸಭೆ ಮುಂದೂಡಿಕೆ
ಸಚಿವರನ್ನು ವರಿಷ್ಠರು ದೆಹಲಿಗೆ ಕರೆಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಗುರುವಾರ ಬೆಳಗ್ಗೆ 11 ಗಂಟೆಗೆ ಕರೆದಿದ್ದ ಸಂಪುಟ ಸಭೆಯನ್ನು ಮುಂದೂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಪಕ್ಷ ಜಯಭೇರಿ ಭಾರಿಸಿದ ನಂತರ ಕಾಂಗ್ರೆಸ್‌ಗೆ ಬಂದ ಮತ ಪ್ರಮಾಣದ ಆಧಾರದ ಮೇಲೆ ಈ ಹಿಂದೆ ವರಿಷ್ಠರು ರಾಜ್ಯ ನಾಯಕರಿಗೆ ಕನಿಷ್ಟ 20 ಸ್ಥಾನಗಳನ್ನು ಗೆಲ್ಲಬೇಕೆಂದು ಗುರಿ ನೀಡಿದ್ದರು.
ಕರ್ನಾಟಕದ ಮಟ್ಟಿಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ಈಗಾಗಲೇ ಪ್ರಕ್ರಿಯೆ ಆರಂಭಿಸಿವೆ.
ಸವಾಲಾಗಿ ಸ್ವೀಕರಿಸಿರುವ ಕಾಂಗ್ರೆಸ್
ಇದನ್ನು ಸವಾಲಾಗಿ ಸ್ವೀಕರಿಸಿರುವ ಕಾಂಗ್ರೆಸ್ ವರಿಷ್ಠರು 26ರ ಗುರಿಯನ್ನು ರಾಜ್ಯ ನಾಯಕರಿಗೆ ನೀಡಿದ್ದಾರೆ.
ಅಷ್ಟೇ ಅಲ್ಲದೆ ಸಂಪನ್ಮೂಲದಲ್ಲಿ ಬಲಿಷ್ಠವಾಗಿರುವ ಸಚಿವರನ್ನೇ ಪ್ರತಿ ಕ್ಷೇತ್ರಕ್ಕೂ ನೇಮಕ ಮಾಡಿದ್ದಾರೆ.
ಮೂರು ಉಪಮುಖ್ಯಮಂತ್ರಿ ಬೇಡಿಕೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ನಗರಕ್ಕೆ ಧಾವಿಸಿದ ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಉಪಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳಾದ ಸಚಿವರಾದ ಡಾ. ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ಹಿರಿಯರನ್ನು ತಾವು ತಂಗಿದ್ದ ಹೋಟೆಲ್‌ಗೆ ಕರೆಸಿಕೊಂಡು ಸುದೀರ್ಘ ಚರ್ಚೆ ಮಾಡಿದ್ದಾರೆ.
ಬೇಡಿಕೆ ಸದ್ಯಕ್ಕೆ ಬಿಡಿ
ಬೇಡಿಕೆ ಮತ್ತು ಇತರ ವಿಚಾರಗಳನ್ನು ಸದ್ಯಕ್ಕೆ ಬಿಡಿ, ಬಿಜೆಪಿ-ಜೆಡಿಎಸ್ ಮಣಿಸಲು ಗಮನಹರಿಸಿ ಎಂದು ಕಿವಿಮಾತು ಹೇಳಿದ್ದಾರೆ.
ಅಷ್ಟೇ ಅಲ್ಲ, ಎಐಸಿಸಿ ಅಧ್ಯಕ್ಷರು ಮತ್ತು ಇತರ ಮುಖಂಡರ ಸಮ್ಮುಖದಲ್ಲೇ ಚುನಾವಣಾ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆ ಹಾಗೂ ಉಳಿದ ವಿಚಾರಗಳ ಬಗ್ಗೆ ಮುಕ್ತವಾಗಿ ಸಮಾಲೋಚನೆ ಮಾಡೋಣ ಗುರುವಾರ ದೆಹಲಿಗೆ ಬನ್ನಿ ಎಂದು ಹೇಳಿದ್ದಾರೆ.
ವರಿಷ್ಠರು ನೀಡಿರುವ ಗುರಿಗೆ ಬಲ ನೀಡಲು ಸುರ್ಜೇವಾಲ ನಾಳೆ ಪ್ರದೇಶ ಕಾಂಗ್ರೆಸ್‌ನ ಎಲ್ಲಾ ಹಂತದ ಸಭೆ ಕರೆದಿದ್ದಾರೆ.
1 comment
Excellent