ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು
ಬೆಂಗಳೂರು:ಬಿಜೆಪಿ ಸರ್ಕಾರದ ಮಾದರಿಯಲ್ಲಿ ಬರ ಪರಿಹಾರ ನೀಡಿ ಇಲ್ಲವೇ ರಾಜೀನಾಮೆ ಕೊಡಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಇಂದಿಲ್ಲಿ ಆಗ್ರಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಸದಾನಂದಗೌಡ, ಬಸವರಾಜ ಬೊಮ್ಮಾಯಿ ಹಾಗೂ ಇತರೆ ನಾಯಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮೇಲೆ ಆರೋಪ ನಿಲ್ಲಿಸಿ, ನೀವು ಘೋಷಿಸಿರುವಂತೆ ರೈತರಿಗೆ 2,000 ರೂ. ಪರಿಹಾರ ನೀಡಿ ಎಂದರು.
ಬೇಜವಾಬ್ದಾರಿ ಸರ್ಕಾರ
ರಾಜ್ಯಪಾಲರಿಗೆ ಸರ್ಕಾರದ ಬೇಜವಾಬ್ದಾರಿತನವನ್ನು ವಿವರಿಸಿ ಮಧ್ಯೆ ಪ್ರವೇಶಿಸುವಂತೆ ಮನವಿ ಮಾಡಿದ್ದೇವೆ.
ಬರದಿಂದ ರಾಜ್ಯದಲ್ಲಿ ಸುಮಾರು 600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ತಿರುಗಿಯೂ ನೋಡುತ್ತಿಲ್ಲ, ಅಧಿಕಾರಿಗಳು ಸಾಂತ್ವನ ಹೇಳಿಲ್ಲ, ಸಚಿವರೂ ರೈತರ ಬಳಿ ಹೋಗಿಲ್ಲ, ಉತ್ತರ ಕರ್ನಾಟಕದಲ್ಲಿ ಜನರ ವಲಸೆ ಆರಂಭವಾಗಿದೆ.
ರೈತರಿಗೆ ಹಣ ತಲುಪಿಲ್ಲ
ಬರಗಾಲ ಶುರುವಾಗಿ ಐದು ತಿಂಗಳಾದರೂ ಸರ್ಕಾರ ನಯಾ ಪೈಸೆ ಪರಿಹಾರ ನೀಡಿಲ್ಲ, ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ 2,000 ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದರು, ಇದುವರೆಗೆ ರೈತರಿಗೆ ಹಣ ತಲುಪಿಲ್ಲ.
ಕಾಂಗ್ರೆಸ್ ಸರ್ಕಾರ ಅಧಿಕಾರದ ಲಾಲಸೆಯಿಂದಾಗಿ ರೈತರನ್ನು ಅನಾಥರನ್ನಾಗಿಸಿದೆ, ಏನೇ ಕೇಳಿದರೂ ಕೇಂದ್ರ ಸರ್ಕಾರ ನೆರವಿಗೆ ಬರುತ್ತಿಲ್ಲ ಎಂದು ಗೂಬೆ ಕೂರಿಸುತ್ತಿದ್ದಾರೆ ಎಂದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪರಿಹಾರಕ್ಕೆ ಕೇಂದ್ರದ ನೆರವಿಗೆ ಕಾಯದೆ ರಾಜ್ಯ ಸರ್ಕಾರವೇ ನೀಡಿತ್ತು, ನಂತರ ಕೇಂದ್ರದಿಂದ ಪರಿಹಾರ ಬಂದಿತ್ತು. ಮೊದಲ ಬಾರಿಗೆ ಡಿಬಿಟಿ ಮುಖಾಂತರ ರೈತರಿಗೆ 3 ಸಾವಿರ ಕೋಟಿ ರೂ.ಗೂ ಅಧಿಕ ಪರಿಹಾರ ನೀಡಲಾಗಿತ್ತು.
ರೈತರ ಬಗ್ಗೆ ಕಾಳಜಿ ಇಲ್ಲ
ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ, ಬರಗಾಲ ಬರಲೆಂದು ರೈತರು ಕಾಯುತ್ತಿದ್ದಾರೆ ಎಂಬುದಾಗಿ ಸಚಿವರೇ ಆರೋಪಿಸುತ್ತಾರೆ ಎಂದು ದೂರಿದರು.
ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರದ ಬೇಜವಾಬ್ದಾರಿತನದ ಬಗ್ಗೆ ವಿವರಿಸಿದ್ದೇವೆ, ರೈತರಿಗೆ ಪರಿಹಾರ ನೀಡದೆ ಬೊಗಳೆ ಬಿಡುತ್ತಿದೆ. ಸರ್ಕಾರ ಕೂಡಲೇ ಪರಿಹಾರ ಕೊಡಲಿ, ಇಲ್ಲವಾದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.