10 ವರ್ಚಸ್ವಿ ಮತ್ತು ಪ್ರಭಾವಿಗಳು ಚುನಾವಣಾ ಕಣಕ್ಕೆ
ಬೆಂಗಳೂರು:ಚುನಾವಣಾ ರಣತಂತ್ರ ನಿಪುಣ ಸುನೀಲ್ ಕನಗೋಳು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಕೆಲವು ಸಚಿವರಿಗೆ ಸಿಂಹ ಸ್ವಪ್ನವಾಗಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸ್ಥಾನ ಗಳಿಸಬೇಕೆಂದರೆ ಕನಿಷ್ಟ 10 ವರ್ಚಸ್ವಿ ಮತ್ತು ಪ್ರಭಾವೀ ಸಚಿವರನ್ನು ಚುನಾವಣಾ ಕಣಕ್ಕಿಳಿಸುವಂತೆ ಎಐಸಿಸಿಗೆ ಕನಗೋಳು ವರದಿ ನೀಡಿದ್ದಾರೆ.
ವರಿಷ್ಠರಿಗೆ ರಣತಂತ್ರ ಮಾಹಿತಿ
ಈಗಾಗಲೇ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೂರ‍್ನಾಲ್ಕು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಧಿನಾಯಕ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ವರದಿ ಆಧಾರದ ಮೇಲೆ ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲ ಯಾವ ಸಚಿವರನ್ನು ಯಾವ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದರೆ ಪಕ್ಷಕ್ಕೆ ಯಾವ ರೀತಿ ಲಾಭವಾಗುತ್ತದೆ ಎಂಬ ಪರಿಪೂರ್ಣ ಮಾಹಿತಿ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಕನಗೋಳು ನಡೆಸಿದ ಸಮೀಕ್ಷೆಗಳಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯಿತು. ಅಲ್ಲದೆ ಇತ್ತೀಚೆಗೆ ತೆಲಂಗಾಣ ರಾಜ್ಯದಲ್ಲೂ ಕನಗೋಳು ತೆರೆಮರೆಯಲ್ಲಿ ಕೆಲಸ ಮಾಡಿದ್ದರು.
ಎಐಸಿಸಿಗೆ ಚುನಾವಣಾ ಪೂರ್ವ ವರದಿ
ಕರ್ನಾಟಕಕ್ಕೆ ಸೀಮಿತವಾಗಿ ಕನಗೋಳು ಅವರಿಂದಲೇ ಚುನಾವಣಾ ಪೂರ್ವ ವರದಿಯನ್ನು ಎಐಸಿಸಿ ಪಡೆದುಕೊಂಡಿದೆ.
ಕನಗೋಳು ವರದಿಗೆ ರಾಹುಲ್ ಗಾಂಧಿ ಹೆಚ್ಚು ಮಾನ್ಯತೆ ನೀಡುತ್ತಾರೆ, ವರದಿ ತಲುಪುತ್ತಿದ್ದಂತೆ ನಗರಕ್ಕೆ ಧಾವಿಸಿ ಕಳೆದ ಮೂರು ದಿನಗಳಿಂದ ಬಿಡಾರ ಹೂಡಿರುವ ಸುರ್ಜೇವಾಲ, ವರದಿಯಲ್ಲಿ ಹೆಸರಿಸಿರುವ ಸಚಿವರುಗಳನ್ನು ತಾವು ತಂಗಿದ್ದ ಹೋಟೆಲ್‌ಗೆ ಕರೆಸಿಕೊಂಡು ಚರ್ಚೆ ಮಾಡಿ, ನೀವು ಪಕ್ಷದ ತೀರ್ಮಾನಕ್ಕೆ ಯಾವುದೇ ತ್ಯಾಗಕ್ಕೂ ಸಿದ್ಧವಾಗಿರುವಂತೆ ತಿಳಿಸಿದ್ದಾರೆ.
ಚುನಾವಣಾ ತಂತ್ರ ಮಾಂತ್ರಿಕನ ವರದಿಯಂತೆ ಕೆಲವು ಸಚಿವರಿಗೆ ಒಳ್ಳೆ ಕೆಲಸ ಮಾಡುತ್ತಿದ್ದೀರಿ ಎಂದು ಶಹಬ್ಬಾಸ್‌ಗಿರಿಯೂ ನೀಡಿದ್ದಾರೆ.
ನಾಳೆ ದೆಹಲಿಯಲ್ಲಿ ಸಭೆ
ಚುನಾವಣಾ ಕಣಕ್ಕಿಳಿಯಬೇಕೆಂಬ ಸಂಭವನೀಯ ಸಚಿವರಿಗೆ ನಾಳೆ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಬದ್ಧರಾಗಿ ಎಂದು ಹೇಳಿ ಕಳುಹಿಸಿದ್ದಾರೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಹೊರತುಪಡಿಸಿ ಉಳಿದ ಸಂಭವನೀಯ ಸಚಿವರಿಗೆ ಮಂತ್ರಿ ಸ್ಥಾನ ಬಿಡಲು ಕಿಂಚಿತ್ತೂ ಮನಸ್ಸಿಲ್ಲ. ಜೊತೆಗೆ ದೆಹಲಿ ರಾಜಕಾರಣವೂ ಬೇಡವಾಗಿದೆ.
ಕನಗೋಳು ನೀಡಿರುವ ವರದಿಯಂತೆ ನಮ್ಮನ್ನು ಚುನಾವಣಾ ಕಣಕ್ಕಿಳಿಯಲು ವರಿಷ್ಠರು ತಾಕೀತು ಮಾಡಿದರೆ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಲೆಕ್ಕಾಚಾರ ಆರಂಭಿಸಿದ್ದಾರೆ. ಗ್ಯಾರಂಟಿ ನೀಡಿ ಪಕ್ಷವನ್ನು ಅಧಿಕಾರಕ್ಕೆ ತಂದ ಕನಗೋಳು ನಮಗೇ ಮುಳುವಾಗಿದ್ದಾನೆ ಎಂದು ಪರಿತಪಿಸುತ್ತಿದ್ದಾರೆ.
ಸಭೆ ನಂತರ ಸಂಭವನೀಯರ ತೀರ್ಮಾನ
ನಾಳೆ ದೆಹಲಿ ಸಭೆ ನೋಡಿದ ನಂತರ ತೀರ್ಮಾನ ಕೈಗೊಳ್ಳಲು ಸಂಭವನೀಯರು ನಿರ್ಧರಿಸಿದ್ದಾರೆ.
ಉನ್ನತ ಮೂಲಗಳ ಪ್ರಕಾರ ವರದಿಯಲ್ಲಿ ಕೆ.ಎಚ್.ಮುನಿಯಪ್ಪ (ಕೋಲಾರ-ಮೀಸಲು), ಚಲುವರಾಯಸ್ವಾಮಿ(ಮಂಡ್ಯ), ಡಾ.ಎಚ್.ಸಿ. ಮಹದೇವಪ್ಪ (ಚಾಮರಾಜನಗರ-ಮೀಸಲು), ಕೆ.ಎನ್. ರಾಜಣ್ಣ (ಚಿತ್ರದುರ್ಗ-ಮೀಸಲು), ಈಶ್ವರ ಖಂಡ್ರೆ (ಬೀದರ್), ಸತೀಶ್ ಜಾರಕಿಹೊಳಿ (ಬೆಳಗಾವಿ), ಎಚ್.ಕೆ ಪಾಟೀಲ್ (ಹಾವೇರಿ) ಸೇರಿದಂತೆ 10 ಸಚಿವರನ್ನು ಹೆಸರಿಸಲಾಗಿದೆ.
ಅಲ್ಲದೆ, ಕೆಲವು ವರ್ಚಸ್ವಿ ಹಾಗೂ ಹಿರಿಯ ಶಾಸಕರನ್ನು ನಿರ್ದಿಷ್ಟ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದರೆ ಪಕ್ಷಕ್ಕೆ ಲಾಭವಾಗಲಿದೆ ಎಂದು ವರದಿಯಲ್ಲಿ ಕನಗೋಳು ತಿಳಿಸಿದ್ದಾರೆ.